ಎಚ್‌ಪಿವಿ ಲಸಿಕೆಯಿಂದ ಕ್ಯಾನ್ಸರ್ ತಡೆ

ಬೀರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಲಸಿಕೆ ಹಾಕಲಾಯಿತು. ಡಾ. ಅರುಣ್, ಭಾಗ್ಯಾ, ಸವಿತಾ, ಇತರರಿದ್ದರು.
ಬೀರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಲಸಿಕೆ ಹಾಕಲಾಯಿತು. ಡಾ. ಅರುಣ್, ಭಾಗ್ಯಾ, ಸವಿತಾ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಡಳಿತ ಆರೋಗ್ಯಾಧಿಕಾರಿ
  • ರೋಗ ತಡೆಯಬಹುದು.
ಬೀರೂರು: ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಮಾನವ ಪ್ಯಾಪಿಲೋಮಾ ವೈರಸ್  (ಎಚ್‌ಪಿವಿ) ಲಸಿಕೆ ಮಹತ್ವದ್ದಾಗಿದೆ ಎಂದು ಇನ್ನರ್‌ವ್ಹೀಲ್ ನಿಕಟಪೂರ್ವ ಅಧ್ಯಕ್ಷೆ ಸವಿತಾ ರಮೇಶ್ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಇನ್ನರ್‌ವ್ಹೀಲ್, ಮೌಲ್ಯ ಟ್ರಸ್ಟ್ ಹಾಗೂ ಇನ್ಫೋಸಿಸ್ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಎರಡನೇ ಹಂತದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಹೆಚ್ಚಾಗುತ್ತಿರುವುದರಿಂದ ಹೆಣ್ಣು ಮಕ್ಕಳು ಹದಿಹರೆಯದವರಿದ್ದಾಗಲೇ ಎಚ್‌ಪಿವಿ ಲಸಿಕೆ ಹಾಕಿಸಿಕೊಂಡರೆ ಗರ್ಭಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಆರೋಗ್ಯವಂತ ಮಹಿಳೆ ಕುಟುಂಬದ ಆಸ್ತಿಯಾಗಿರುತ್ತಾಳೆ ಎಂದರು.
ಇನ್ನರ್‌ವ್ಹೀಲ್ ಸಂಸ್ಥೆ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ 9 ವರ್ಷದಿಂದ 14 ವರ್ಷದ 400 ಬಾಲಕಿಯರಿಗೆ ಉಚಿತವಾಗಿ ಎಚ್‌ಪಿವಿ ಮೊದಲನೇ ಲಸಿಕೆ ನೀಡಿತ್ತು. ಆ ಪೈಕಿ 200 ಬಾಲಕಿಯರಿಗೆ ಈ ಬಾರಿ ಎರಡನೇ ಹಂತದ ಲಸಿಕೆ ನೀಡಲಾಗುತ್ತಿದೆ. ಇದು ಲಸಿಕೆ ಗರ್ಭಾಶಯದ ಕ್ಯಾನ್ಸರ್ ಉಂಟುಮಾಡುವ ವೈರಸ್ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುತ್ತದೆ ಎಂದರು.
 ಆಡಳಿತ ಆರೋಗ್ಯಾಧಿಕಾರಿ ಡಾ. ಅರುಣ್ ಮಾತನಾಡಿ, ಭಾರತದ ಮಹಿಳೆಯರಲ್ಲಿ ಗರ್ಭಾಶಯ ಕ್ಯಾನ್ಸರ್ ಪ್ರಮುಖ ಮರಣ ಕಾರಣಗಳಲ್ಲಿ ಒಂದಾಗಿದೆ. ಸರಿಯಾದ ಸಮಯದಲ್ಲಿ ಲಸಿಕೆ ಹಾಗೂ ನಿಯಮಿತ ತಪಾಸಣೆಯಿಂದ ರೋಗ ತಡೆಯಬಹುದು. ಎಚ್‌ಪಿವಿ ಲಸಿಕೆ ಪಡೆದಲ್ಲಿ ಶೇ.99ರಷ್ಟು ಕಾಯಿಲೆಗೆ ತುತ್ತಾಗುವುದನ್ನು ತಡೆಯಬಹುದು ಎಂದರು.
ಲಸಿಕೆಯನ್ನು ಪಡೆದರೆ ಏನೋ ಸಮಸ್ಯೆಯಾಗುತ್ತದೆ ಎಂಬ ವದಂತಿಯನ್ನು ನಂಬಬೇಡಿ. ವಿಜ್ಞಾನಿಗಳು ಇಂಥ ಲಸಿಕೆಗಳನ್ನು ಕಂಡುಹಿಡಿಯಲು ಹತ್ತಾರು ವರ್ಷಗಳ ಶ್ರಮವಹಿಸಿರುತ್ತಾರೆ. ಅದರಲ್ಲೂ ಆರೋಗ್ಯ ಇಲಾಖೆಯೇ ಇದನ್ನು ಪರೀಕ್ಷಿಸಿ ನೀಡುತ್ತಿದೆ. ಲಸಿಕೆ ಸಂಪೂರ್ಣ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಹೇಳಿದರು.
ಇನ್ನರ್‌ವ್ಹೀಲ್ ಅಧ್ಯಕ್ಷೆ ಭಾಗ್ಯಾ ನಾರಾಯಣ್ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಇನ್ನರ್‌ವ್ಹೀಲ್ ಜಗತ್ತಿನಾದ್ಯಂತ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವಿವಿಧ ಶಾಲೆಗಳ 200 ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಯಿತು. ಇನ್ನರ್‌ವ್ಹೀಲ್‌ನ ಲತಾ ಮಂಜುನಾಥ್, ಅರುಣಾ, ಚಂದ್ರಿಕಾ, ಶಾಲಾ ಮುಖ್ಯಶಿಕ್ಷಕ ಚಂದ್ರಪ್ಪ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net