ಕೊಪ್ಪ: ತಾಲೂಕಿನಲ್ಲಿ ಭೂ ಒತ್ತುವರಿ ಮಾಡಿ ಸಾಗುವಳಿ ಮಾಡಿರುವ ಜಮೀನನ್ನು ತೆರವು ಮಾಡುವಂತೆ ಆದೇಶಿಸಿರುವುದನ್ನು ರದ್ದುಪಡಿಸಿ ಸಾಗುವಳಿ ಜಮೀನಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಶೃಂಗೇರಿ ಕ್ಷೇತ್ರ ರೈತ ಸಂಘ, ಹಸಿರು ಸೇನೆ ಸದಸ್ಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಲಿಖಿತ ಮೋಹನ್‌ಗೆ ಮನವಿ ಸಲ್ಲಿಸಿದರು.
ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 45 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ 5 ಗುಂಟೆ ಜಮೀನನ್ನು ಜು.2ರಂದು ಏಕಾಏಕಿ ತಹಸೀಲ್ದಾರ್ ಅವರು ತೆರವು ಮಾಡಿಸಿದ್ದಾರೆ. ತಹಸೀಲ್ದಾರ್ ಅವರನ್ನು ವಿಚಾರಿಸಿದಾಗ ಅವರು ಮೇಲಾಧಿಕಾರಿಗಳ ಆದೇಶದಂತೆ ತೆರವುಗೊಳಿಸಿರುವುದಾಗಿ ತಿಳಿಸಿದ್ದಾರೆ. ಹಿಂದೆ ಈ ಭಾಗದ ರೈತ ನಾಯಕರ ಸಮ್ಮುಖದಲ್ಲಿ ಈ ಸಮಸ್ಯೆ ಪರಿಹರಿಸಲಾಗಿತ್ತು. ಆದರೆ ಮತ್ತೆ ಆ ಬಡ ರೈತನನ್ನು ಹಿಂಸಿಸುತ್ತಿರುವುದು ಖಂಡನೀಯ. ಫಾರ್ಮ್ ನಂ.50, 53, 57 ಹಾಗೂ 94 ಸಿ, 94ಸಿಸಿ ಅಡಿಯಲ್ಲಿ ಹಾಗೂ ಕಂದಾಯ ಗ್ರಾಮ, ಕಂದಾಯ ಉಪಗ್ರಾಮದಡಿ ಹಕ್ಕುಪತ್ರ ನೀಡಲು ಅವಕಾಶವಿದ್ದರೂ ಅಧಿಕಾರಿಗಳು ಸ್ಥಳ ಪರಿಶೀಲಿಸದೆ ಒತ್ತುವರಿ ತೆರವುಗೊಳಿಸಿರುವುದು ಸರಿಯಲ್ಲ ಎಂದು ದೂರಿದರು.
ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾಚರಣ್ ಕುಂಚೂರು ಮಾತನಾಡಿ, ಅಧಿಕಾರಿಗಳಿಗೆ ಕೆಲಸದಲ್ಲಿ ಬದ್ಧತೆ ಇದ್ದಲ್ಲಿ ನೂರಾರು ಎಕರೆ ಒತ್ತುವರಿ ಮಾಡಿದ ಶ್ರೀಮಂತರ ಜಮೀನನ್ನು ತೆರವುಗೊಳಿಸಿ ಬಡವರನ್ನು ಶೋಷಣೆ ಮಾಡುವುದನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿ, ಅರಣ್ಯ, ಕಂದಾಯ ಭೂಮಿ ಗುರುತಿಸಿ ಜಮೀನು ಮಂಜೂರಾತಿ ಮಾಡಲು ಜಂಟಿ ಸರ್ವೇ ನಡೆಯುತ್ತಿರುವ ವೇಳೆ ಒತ್ತುವರಿ ಜಮೀನು ತೆರವುಗೊಳಿಸಿರುವುದು ಸರಿಯಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ದಂಡಿನಮಕ್ಕಿ, ಶಿವಕರ ಶೆಟ್ಟಿ, ದೀಪಕ್ ಕುದುರೆಗುಂಡಿ, ಪ್ರಶಾಂತ್, ಮಹಮ್ಮದ್ ತಯೀಬ್, ವಿಜಯಾನಂದ, ಶ್ರೀ ನಿವಾಸ್ ಕಾರಂಗಿ ಮತ್ತಿತರರು ಇದ್ದರು.