ವಿದ್ಯಾರ್ಥಿಗಳ ಸಾಧನೆಗೆ ಪ್ರೇರೇಪಿಸುತ್ತಿರುವ ಬ್ರಿಗೇಡ್ ಸಂಸ್ಥೆ

ಚಿಕ್ಕಮಗಳೂರು ಹೊಸಮನೆ ವೃತ್ತದ ಸಮೀಪ ಬ್ರಿಗೇಡ್ ಸಂಸ್ಥೆಯಿಂದ ನವೀಕರಣಗೊಂಡಿರುವ 105 ವರ್ಷ ಹಳೆಯದಾದ ವಿಶ್ವವಿದ್ಯಾಲಯ ವಿದ್ಯಾ ಶಾಲೆ ಕಟ್ಟಡ ಹಾಗೂ ಕ್ರೀಡಾಂಗಣ ಉದ್ಘಾಟನೆಯ ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಉದ್ಘಾಟಿಸಿದರು.
ಚಿಕ್ಕಮಗಳೂರು ಹೊಸಮನೆ ವೃತ್ತದ ಸಮೀಪ ಬ್ರಿಗೇಡ್ ಸಂಸ್ಥೆಯಿಂದ ನವೀಕರಣಗೊಂಡಿರುವ 105 ವರ್ಷ ಹಳೆಯದಾದ ವಿಶ್ವವಿದ್ಯಾಲಯ ವಿದ್ಯಾ ಶಾಲೆ ಕಟ್ಟಡ ಹಾಗೂ ಕ್ರೀಡಾಂಗಣ ಉದ್ಘಾಟನೆಯ ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವವಿದ್ಯಾಲಯ ವಿದ್ಯಾಶಾಲಾ ನವೀಕೃತ ಕಟ್ಟಡ ಉದ್ಘಾಟನೆ
  • ಉಪಸಭಾಪತಿ ಎಂ.ಕೆ.ಪ್ರಾಣೇಶ್ ಬಣ್ಣನೆ
ಚಿಕ್ಕಮಗಳೂರು: ಬ್ರಿಗೇಡ್ ಫೌಂಡೇಶನ್ ನಂತಹ ಸಂಸ್ಥೆಗಳು ಶಾಲೆಗಳನ್ನು ಸುಧಾರಿಸಲು ಮುಂದೆ ಬರುವ ಮೂಲಕ ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮಾಡಲು ಪ್ರೇರೇಪಿಸುತ್ತಿವೆ. ಉತ್ತಮ ಕಲಿಕಾ ಸ್ಥಳಗಳನ್ನು ನಿರ್ಮಾಣ ಮಾಡುವ ಮೂಲಕ ಮಕ್ಕಳ ಶ್ರೇಯೋಭಿವೃದ್ಧಿಗೆ ಬ್ರಿಗೇಡ್ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸಂತಸ ವ್ಯಕ್ತಪಡಿಸಿದರು.
ನಗರದ ಹೊಸಮನೆ ವೃತ್ತದ ಸಮೀಪ ಬ್ರಿಗೇಡ್ ಸಂಸ್ಥೆಯಿಂದ ನವೀಕರಣಗೊಂಡಿರುವ 105 ವರ್ಷ ಹಳೆಯದಾದ ವಿಶ್ವವಿದ್ಯಾಲಯ ವಿದ್ಯಾ ಶಾಲೆ ಕಟ್ಟಡ ಹಾಗೂ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ನಾನು ಓದಿದ ಶಾಲೆ ಇಷ್ಟೊಂದು ಅದ್ಭುತವಾಗಿ ನವೀಕರಣಗೊಂಡಿರುವುದು ಅತಿ ಹೆಚ್ಚು ಸಂತಸ ತಂದಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಆತ್ಮತೃಪ್ತಿ ತಂದಿದೆ ಎಂದರು.
105 ವರ್ಷಗಳ ಹಳೆ ಶಾಲೆಯ ನವೀಕರಣ ಮೂರನೇ ಶ್ರೇಣಿಯ ನಗರಗಳಲ್ಲಿನ ಶೈಕ್ಷಣಿಕ ಮೂಲಸೌಕರ್ಯಗಳನ್ನು ಹೇಗೆ ಮರುರೂಪಿಸಬಹುದು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಚಿಕ್ಕಮಗಳೂರು ಮೂಲದ ಮೈಸೂರು ಕುಟುಂಬದ ಎಂ.ಆರ್.ಜೈಶಂಕರ್ ಹಾಗೂ ಅವರ ಕುಟುಂಬದವರು ಈ ಶಾಲೆ ಮಾತ್ರವಲ್ಲದೆ ಊರಿನ ಋಣ ತೀರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಹೊಸಮನೆ ವೃತ್ತದಲ್ಲಿ ಬ್ರಿಗೇಡ್ ಫೌಂಡೇಷನ್ ನಿಂದ ನಿರ್ಮಾಣ ಮಾಡಿರುವ ಗಾಂಧಿ ಸ್ಮಾರಕ ಹಾಗೂ ಸ್ವತಂತ್ರ ಉದ್ಯಾನವನ ಇಂದು ನಗರದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿರುವುದು ವಿಶೇಷ ಎಂದರು.
ಬ್ರಿಗೇಡ್ ಫೌಂಡೇಶನ್ ಸಹಕಾರದಿಂದಾಗಿ ವಿಶ್ವವಿದ್ಯಾಲಯ ಶಾಲೆ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ನವೀಕರಣಗೊಂಡಿದೆ. ಈ ಅನುದಾನಿತ ಶಾಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ನೂರು ವರ್ಷದ ಹಿಂದೆ ಪ್ರಾಥಮಿಕ ಶಾಲೆಯಿಂದ ಆರಂಭಗೊಂಡ ಸಂಸ್ಥೆಗಳು ಇಂದು ಮೆಡಿಕಲ್ ಕಾಲೇಜು ಹೊಂದಿವೆ. ಆದರೆ ವಿಶ್ವವಿದ್ಯಾಲಯ ಶಾಲೆ ಒಂದು ಹಂತದಲ್ಲಿ ಸೊರಗಿ ಹೋಗಿತ್ತು. ಆದರೆ ಜೈಶಂಕರ್ ಅವರು ತಾವು ಓದಿದ ಶಾಲೆಯನ್ನು ನವೀಕರಿಸುವ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಹಣ ವೆಚ್ಚ ಮಾಡುವುದರಿಂದ ಸುಖ ಸಿಗುತ್ತದೆ. ಆದರೆ ಆ ಸುಖ ಅಲ್ಪತೃಪ್ತಿ ನೀಡುತ್ತದೆ. ಆದರೆ ದಾನ ಮಾಡುವುದರಿಂದ ಆತ್ಮ ತೃಪ್ತಿ ಸಿಗುತ್ತದೆ. ಚಿಕ್ಕಮಗಳೂರಿನ ಮೈಸೂರು ಕುಟುಂಬದ ದಾನದ ಪರಂಪರೆ ನಾಲ್ಕನೇ ತಲೆಮಾರಿಗೆ ಮುಂದುವರಿದಿರುವುದು ಆ ಕುಟುಂಬದ ಸಾಮಾಜಿಕ ಬದ್ಧತೆಯನ್ನು ತೋರುತ್ತದೆ ಎಂದು ಹೇಳಿದರು.
ಚಿಕ್ಕಮಗಳೂರಿನ ಮೈಸೂರು ಕುಟುಂಬ ಅರಳುಗುಪ್ಪೆ ಕುಟುಂಬ ಹಾಗೂ ಇಂದಾವರ ಕುಟುಂಬಗಳ ಕೊಡುಗೆ ಚಿಕ್ಕಮಗಳೂರಿಗೆ ಹೆಚ್ಚಿದೆ. ಗಾಲ್ಫ್ ಕೋರ್ಟ್, ಸರ್ಕಾರಿ ಆಸ್ಪತ್ರೆ, ಅರಳಗುಪ್ಪೆ ಪಾಲಿಟೆಕ್ನಿಕ್, ಎಂಇಎಸ್ ಸಂಸ್ಥೆ, ಐಡಿಜಿಜಿ ಕಾಲೇಜು ಹೀಗೆ ಪ್ರತಿಯೊಂದರ ಆರಂಭಕ್ಕೂ ಈ ಕುಟುಂಬಗಳ ಕೊಡುಗೆ ದೊಡ್ಡದಿದೆ ಎಂದು ಸ್ಮರಿಸಿದರು.
ಕೊಟ್ಟಿದ್ದು ಕೆಡಲು ಸಾಧ್ಯವಿಲ್ಲ. ಅದರಲ್ಲೂ ಶಾಲೆಗೆ ನೀಡುವ ದಾನ ನವ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಹಿಂದೆ ಅನ್ನ, ಔಷಧ, ವಿದ್ಯೆ ವ್ಯಾಪಾರದ ಸರಕಾಗಿರಲಿಲ್ಲ. ಆದರೆ ಇಂದು ಈ ಮೂರು ಉದ್ದಿಮೆಗಳಾಗಿ ಪರಿವರ್ತನೆಯಾಗಿವೆ. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಶಾಲೆ ಬಡ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು. ಮಕ್ಕಳು ಮಣ್ಣಿನ ಮುದ್ದೆಯಂತೆ. ಅವರಿಗೆ ಒಳ್ಳೆಯ ಆಕಾರ ನೀಡುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸುವ ಕೆಲಸ ಮಾಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ವಿಶ್ವವಿದ್ಯಾಲಯ ಶಾಲೆಯಲ್ಲಿ ಓದಿದ ಹಲವು ಮಕ್ಕಳು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಎನ್ನುವುದು ಯಾರ ಸ್ವತ್ತಲ್ಲ. ಇಂದು ಸಾಮಾನ್ಯ ಕುಟುಂಬದವರ ಮಕ್ಕಳು ಉತ್ತಮವಾಗಿ ಓದಿದರೆ ದೊಡ್ಡ ಹುದ್ದೆ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಕೋಟಿ ಕೋಟಿ ಖರ್ಚು ಮಾಡಿ ದೇವಸ್ಥಾನ ನಿರ್ಮಾಣ ಮಾಡುವ ಬದಲು, ಅದೇ ಹಣದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ದೇವಾಲಯ ನಿರ್ಮಾಣ ಮಾಡಿ ಪೂಜಾರಿ ಸಿಗದಿದ್ದರೆ ಅಥವಾ ಭಕ್ತರು ಬರದಿದ್ದರೆ ಅದು ವ್ಯರ್ಥ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬ್ರಿಗೇಡ್ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಡಿಡಿಪಿಐ ತಿಮ್ಮರಾಜು, ದಾನಿಗಳಾದ ಎಂ.ಆರ್.ಗುರುಮೂರ್ತಿ, ಎಂ.ಆರ್.ನಾಗರಾಜ್, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಸದಸ್ಯರಾದ ಸುಜಾತ ಶಿವಕುಮಾರ್, ಎ.ಸಿ.ಕುಮಾರ್, ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಪ್ರೇಮ್ ಕುಮಾರ್ ಮತ್ತಿತರರಿದ್ದರು.
ಓದಿದ ಶಾಲೆ ನವೀಕರಿಸಿದ್ದು ತೃಪ್ತಿ ತಂದಿದೆ
ನಾನು ಓದಿದ ವಿಶ್ವವಿದ್ಯಾಲಯ ಶಾಲೆಯನ್ನು ನವೀಕರಣ ಮಾಡಿರುವುದು ಹಾಗೂ ನೂತನ ಕ್ರೀಡಾಂಗಣ ನಿರ್ಮಿಸಿರುವುದು ತೃಪ್ತಿ ತಂದಿದೆ ಎಂದು ಬ್ರಿಗೇಡ್ ಗ್ರೂಪ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್ ತಿಳಿಸಿದರು.
ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ನಾನು ಬ್ರಿಗೇಡ್ ಗ್ರೂಪ್ ಮುಖ್ಯಸ್ಥ ಎನ್ನುವುದಕ್ಕಿಂತಲೂ ವಿಶ್ವವಿದ್ಯಾಲಯ ಶಾಲೆ ವಿದ್ಯಾರ್ಥಿ ಎನ್ನುವ ಹೆಮ್ಮೆ ಇದೆ. ಹೀಗಾಗಿಯೇ ನಾವು ಈ ಯೋಜನೆಯನ್ನು ಒಂದು ಕಟ್ಟಡದ ನವೀಕರಣ ಎಂದು ಭಾವಿಸಲಿಲ್ಲ. ಬದಲಿಗೆ ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಬರುವಂತೆ ಪ್ರೇರೇಪಿಸುವ ಕೆಲಸ ಮಾಡಿದ್ದೇವೆ ಎಂದರು.
ವೈಯಕ್ತಿಕವಾಗಿ ಈ ಯೋಜನೆ ನನಗೆ ಅತ್ಯಂತ ಭಾವನಾತ್ಮಕವಾದುದಾಗಿದೆ. ಇದೇ ಶಾಲೆಯಲ್ಲಿ ನನ್ನ ಬಾಲ್ಯದ ಸುಂದರ ದಿನಗಳನ್ನು ಕಳೆದಿದ್ದೇನೆ. ನನ್ನ ಬದುಕು ಮತ್ತು ಮೌಲ್ಯಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಲೆಗೆ ಕೊಡುಗೆ ನೀಡುವುದು ನನಗೆ ಸಿಕ್ಕ ಸೌಭಾಗ್ಯ ಮತ್ತು ಗೌರವ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಶಾಲಾ ಕಟ್ಟಡ ನವೀಕರಣದ ಜೊತೆಗೆ ಸುಸಜ್ಜಿತ ಕ್ರೀಡಾಂಗಣ, ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ಶಾಲಾ ವಾಹನ ಹೀಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಶಾಲೆಯಲ್ಲಿ ಎಲ್ ಕೆಜಿಯಿಂದ 7ನೇ ತರಗತಿವರೆಗೆ 120 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ನಾವು ಒಂದು ಸಾವಿರ ಮಕ್ಕಳು ವ್ಯಾಸಂಗ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಮೈಸೂರು ಕುಟುಂಬದ ಎಂ.ಆರ್.ಜೈಶಂಕರ್‌ ಸೇರಿದಂತೆ ಅವರ ಸಹೋದರರು ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿಗೆ ಸಾಕ್ಷೀಭೂತವಾದಂತಿದ್ದಾರೆ. ದೊಡ್ಡ ಉದ್ಯಮಿಗಳಾದರೂ ಸಾಮಾನ್ಯರೊಂದಿಗೆ ಸಾಮಾನ್ಯರಂತೆಯೇ ಬೆರೆಯುವ ಗುಣ ರಕ್ತಗತವಾಗಿಯೇ ಅವರಿಗೆ ಬಂದಿದೆ. ಹೀಗಾಗಿಯೇ ಹತ್ತು ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.
ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ
ಎಂ.ಆರ್.ಜೈಶಂಕರ್ ಅವರು ತಾವು ಓದಿದ ಶಾಲೆಯನ್ನು ಅತ್ಯಾಧುನಿಕವಾಗಿ ನವೀಕರಣ ಮಾಡಿದ್ದಾರೆ. ಈ ಶಾಲೆಯಲ್ಲಿ ಪ್ರೌಢ ಶಿಕ್ಷಣ ಆರಂಭಿಸುವುದಾದರೆ ಅದಕ್ಕೆ ಸರ್ಕಾರದಿಂದ ಏನು ಸೌಕರ್ಯಗಳು ಬೇಕು, ಅದಲ್ಲವನ್ನು ಒದಗಿಸಿಕೊಡುವ ಕೆಲಸವನ್ನು ನಾನು ಮಾಡುತ್ತೇನೆ.
ಎಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net