

ಪ್ರಮುಖ ಮುಖ್ಯಾಂಶಗಳು
ಕಳಸ: ಕ್ಷೇತ್ರದ ಸಮಗ್ರ ಅಭಿವದ್ಧಿಯೇ ನನ್ನ ಮೊದಲ ಆದ್ಯತೆ. ಎರಡು ವರ್ಷಗಳಲ್ಲಿ ಕಳಸ ತಾಲೂಕಿಗೆ ಸುಮಾರು 100 ಕೋಟಿ ರೂಪಾಯಿ ಅನುದಾನ ತರುವ ಮೂಲಕ ಮೂಲಭೂತ ಸೌಲಭ್ಯ ಒದಗಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಮಾರ್ಕೋಡು ಗ್ರಾಮದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಕಾಲುಸಂಕದ ಉದ್ಘಾಟನೆ ಹಾಗೂ ವಿವಿಧ ಅಭಿವದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕಳಸ ತಾಲೂಕಿನಲ್ಲಿ ಇದುವರೆಗೆ ಕಿರು ಸೇತುವೆಗಳು ಹಾಗೂ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ಕಾಂಕ್ರೀಟ್ ಕಾಣದ ರಸ್ತೆಗಳು ಈಗ ಸುಸಜ್ಜಿತವಾಗಿವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಭಾಗಕ್ಕೂ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಂಸೆ ಗ್ರಾಮದ ಮಾಕೋಡು ಎಂಬಲ್ಲಿನ ಗ್ರಾಮಸ್ಥರ ದಶಕಗಳ ಬೇಡಿಕೆಯಾಗಿದ್ದ ಕಾಲುಸಂಕವನ್ನು ಶಾಸಕರು ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು. ಕಳಸ-ಬಾಳೆಹೊನ್ನೂರು ಸಂಪರ್ಕಿಸುವ ಕಗ್ಗನಳ್ಳದ ಶಿಥಿಲಗೊಂಡಿದ್ದ ಸೇತುವೆಯನ್ನು 3.5 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಶಂಕರಗುಡಿಗೆ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್, ಪ್ರಮುಖರಾದ ರಾಜೇಂದ್ರ ಹೆಬ್ಬಾರ್, ಮಹಮ್ಮದ್ ರಫೀಕ್, ವೀರೇಂದ್ರ ಜೈನ್, ವಿಶ್ವನಾಥ್, ಸುಧಾಕರ್ ಕಡೆಕುಡಿಗೆ, ಸುಜಿತ್ ಬೆಳ್ಳ, ಶ್ರೀನಿವಾಸ್, ಸಂಶುದ್ದೀನ್, ರಾಮ್‌ದೇವ್, ಚೇತನ್, ಉದಯ ಮುಳ್ಳೋಡಿ, ಗಣೇಶ್ ಭಟ್ ಇತರರಿದ್ದರು.