ಕಡೂರು: ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಲಿದ್ದು, ರಕ್ತದ ಅವಶ್ಯಕತೆ ಇರುವ ಜೀವಿಗಳಿಗೆ ರಕ್ತದಾನ ಮಾಡುವ ಮೂಲಕ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾ ಮಲ್ಲೇಗೌಡ ಆಸ್ಪತ್ರೆಯ ರಕ್ತನಿಧಿ ಶೇಖರಣ ಘಟಕದ ವೈದ್ಯರಾದ ಡಾ.ಭರತ್ ತಿಳಿಸಿದರು.
ಹಿರೇನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾದಿಯರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಜನರ ಸಧೃಡ ದೇಹಕ್ಕೆ ಅರೋಗ್ಯ ಬಹಳ ಮುಖ್ಯ. ಆರೋಗ್ಯಯುತ ವ್ಯಕ್ತಿಯು ರಕ್ತದಾನ ಮಾಡುವ ಮೂಲಕ ತಮ್ಮ ದೇಹದ ರಕ್ತವನ್ನು ಮತ್ತಷ್ಟು ಉತ್ಪತ್ತಿಗೊಳಿಸಲು ಸಹಕಾರಿಯಾಗಲಿದೆ. ಯುವ ಸಮೂಹ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ಶಿಬಿರದಲ್ಲಿ ಸುಮಾರು 63 ಯೂನಿಟ್ ರಕ್ತ ಸಂಗ್ರಹವಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸ್ವಾತಿ ಡೊಂಗ್ರೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ಪ್ರಸನ್ನ, ವೀಣಾ, ಜಯಣ್ಣ ಸೇರಿದಂತೆ ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಇದ್ದರು.