ಶೃಂಗೇರಿ: ರಾಷ್ಟ್ರಗೀತೆಗೆ ಅವಮಾನ ಮಾಡಿದ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಭಾರತ ಮಾತೆ ದೇಶದ ಅಸ್ಮಿತೆ. ಆಕೆ ದೇಶದ ಸರ್ವ ನಾಗರಿಕರ ಮಹಾತಾಯಿ. ಅಂತಹ ಭಾರತಮಾತೆಯನ್ನು ಸೃತ್ತಿಸುವ ರಾಷ್ಟ್ರಗೀತೆ ಹಾಡುವಾಗ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾಗಾಂಧಿ ತಡೆ ನೀಡಿರುವುದು ದೇಶಕ್ಕೆ ಮಾಡಿದ ಅಪಮಾನ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ನಿಲುವಾಗಿಲು ತಿಳಿಸಿದರು.
ಭಾರತ ಧರ್ಮ ಭೂಮಿ. ನಮ್ಮ ದೇಶದಲ್ಲಿ ಪವಿತ್ರ ನದಿಗಳು, ಮಲಯ ಪರ್ವತದಿಂದ ಬರುವ ತಂಪಾದ ಗಾಳಿ ಹಾಗೂ ಬೆಳೆಗಳ ಹಸಿರುಗಳನ್ನು ಮುಂತಾದ ದೇಶದ ಪ್ರಾಕೃತಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಆನವರಣಗೊಳಿಸುವ ವಂದೇ ಮಾತರಂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೀರಿದ ಪ್ರಭಾವ ಅನನ್ಯ. ನಮ್ಮ ರಾಷ್ಟ್ರಗೀತೆ ನಮ್ಮ ದೇಶದ ಹೆಮ್ಮೆಯ ಪ್ರತೀಕ. ವಂದೇ ಮಾತರಂ ಗೀತೆ ಸಂದೇಶ ರಾಷ್ಟ್ರಭಕ್ತ ಯುವಪೀಳಿಗೆಗೆ ಆದರ್ಶ. ಇಂತಹ ಉನ್ನತ ಮೌಲ್ಯ ಸಾರುವ ರಾಷ್ಟ್ರಗೀತೆಗೆ ಕೇಂದ್ರಸರ್ಕಾರ ಹೆಚ್ಚು ಗೌರವ ನೀಡಿದೆ. ದೇಶದಲ್ಲಿ ನೆಲೆನಿಂತು ಇಲ್ಲಿನ ಎಲ್ಲ ಸೌಕರ್ಯಗಳನ್ನು ಅನುಭವಿಸುತ್ತಿರುವ ರಾಷ್ಟ್ರನಾಯಕಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತೋರಿದ ವರ್ತನೆ ಸರಿಯಲ್ಲ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್, ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್, ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಸಂಪೇಕೊಳಲು, ಬಿಜೆಪಿ ಮುಖಂಡರಾದ ರಮೇಶ್, ಡಿ.ಸಿ.ಶಂಕರಪ್ಪ, ರತ್ನಾಕರ್ ಶೆಟ್ಟಿ, ವಿಜಯತಿಪ್ಪರಮಕ್ಕಿ ಉಪಸ್ಥಿತರಿದ್ದರು.