

ಪ್ರಮುಖ ಮುಖ್ಯಾಂಶಗಳು
ಬೀರೂರು: ಬೀರೂರು-ಕಡೂರು ರಸ್ತೆಯ ಲಕ್ಷ್ಯಾ ಕಲ್ಯಾಣ ಮಂದಿರದ ಬಳಿ ಸೋಮವಾರ ರಾತ್ರಿ ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಬೀರೂರಿನ ಬಳ್ಳಾರಿ ಕ್ಯಾಂಪ್‌ನ ಇಂದಿರಾನಗರದ ವಾಸಿ ತೀರ್ಥಂಕರ (32) ಮೃತ ದುರ್ದೈವಿ. ಮೃತನ ಪರಿಚಯಸ್ಥೆ ಕಡೂರು ವಾಸಿ ಯಶೋದಾ ಎಂಬುವವರು ಕಡೂರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಪರಿಚಯಸ್ಥ ತೀರ್ಥಂಕರ ಕೂಡ ಕಡೂರಿಗೆ ಹೋಗುತ್ತಿರುವುದಾಗಿ ತಿಳಿಸಿ ಕಡೂರಿಗೆ ಬಿಡುವುದಾಗಿ ಬೈಕ್‌ನ ಹಿಂಬದಿ ಕೂರಿಸಿಕೊಂಡು ಹೊರಟಿದ್ದರು. ಲಕ್ಷ್ಯಾ ಕಲ್ಯಾಣ ಮಂಟಪದ ಬಳಿ ಕಡೂರು ಕಡೆಯಿಂದ ಅತಿವೇಗವಾಗಿ ಬಂದ ಕಾರು ಇನ್ನೊಂದು ವಾಹನವನ್ನು ಹಿಂದಿಕ್ಕುತ್ತಿದ್ದಾಗ ಎದುರುಗಡೆ ಬರುತ್ತಿದ್ದ ತೀರ್ಥಂಕರ ಅವರ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಮತ್ತು ಬೈಕ್ ಸಂಪೂರ್ಣ ಜಖಂಗೊಂಡಿವೆ. ಬೈಕ್ ಓಡಿಸುತ್ತಿದ್ದ ತೀರ್ಥಂಕರ ಅವರಿಗೆ ಗಂಭೀರ ಪೆಟ್ಟಾಗಿ, ಹಿಂಬದಿ ಕುಳಿತಿದ್ದ ಯಶೋದಾ ಅವರ ಕಾಲು ಹಾಗೂ ಸೊಂಟಕ್ಕೆ ಪೆಟ್ಟಾಗಿದೆ. ತಕ್ಷಣ ಸಾರ್ವಜನಿಕರು ಉಪಚರಿಸಿ ಆಂಬುಲೆನ್ಸ್‌ನಲ್ಲಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀರ್ಥಂಕರ ಮೃತಪಟ್ಟರು. ಯಶೋದಾ ಅವರು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.