ಸಣ್ಣ ರೈತರ ದಾರಿ ತಪ್ಪಿಸುತ್ತಿರುವ ದೊಡ್ಡ ಬೆಳೆಗಾರರು

ಎಂ.ಎಚ್.ಅಮರ್‌ನಾಥ್
ಎಂ.ಎಚ್.ಅಮರ್‌ನಾಥ್
Published on
ಮೂಡಿಗೆರೆ: ಸಣ್ಣ ರೈತರ 10 ಹೆಚ್‌ಪಿ ಒಳಗಿನ ಪಂಪ್‌ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ನಾವು ಕಳೆದ 10ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಕೆಲ ದೊಡ್ಡ ಬೆಳೆಗಾರರು ಇಂಧನ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರನ್ನು ಭೇಟಿ ಮಾಡುವಂತೆ ಬೇಡಿಕೆ ಇಟ್ಟು ಸಣ್ಣ ರೈತರ ಬೇಡಿಕೆ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ ಎಂದು 10 ಹೆಚ್‌ಪಿ ಒಳಗಿನ ವಿದ್ಯುತ್ ಬಳಕೆದಾರರ ವೇದಿಕೆ ಮುಖಂಡ ಎಂ.ಎಚ್.ಅಮರ್‌ನಾಥ್ ಅಸಮಾಧಾನ ವ್ಯಕ್ತಪಡಿಸಿದರು.
10 ಹೆಚ್‌ಪಿವರೆಗೆ ಕೃಷಿ ಪಂಪ್‌ಸೆಟ್ಗಳಿಗೆ ಸರ್ಕಾರ ಉಚಿತ ಪೂರೈಕೆ ಮಾಡಬೇಕು. ವರ್ಷದಲ್ಲಿ 15 ದಿನ ಮಾತ್ರ ಬಳಕೆ ಮಾಡುವ ಕೃಷಿ ಸಂಬಂಧಿತ ವಿದ್ಯುತ್ ಸಂಪರ್ಕಕ್ಕೆ 12 ತಿಂಗಳ ಪೂರ್ತಿ ಬಿಲ್ ಪಾವತಿಸುವಂತೆ ಮೆಸ್ಕಾಂ ಅಧಿಕಾರಿಗಳು ಸಣ್ಣ ರೈತರ ಮೇಲೆ ಒತ್ತಡ ಹೇರುವುದು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ಖಂಡಿಸಿ ಕಳೆದ 10 ವರ್ಷದಿಂದ 10 ಹೆಚ್‌ಪಿ ಒಳಗಿನ ವಿದ್ಯುತ್ ಬಳಕೆದಾರರ ವೇದಿಕೆಯಿಂದ ರೈತರ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ 10 ಹೆಚ್‌ಪಿ ವರೆಗಿನ ಕೃಷಿ ಪಂಪ್‌ಸೆಟ್ಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದಾಗಿ ಘೋಷಣೆ ಮಾಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ರೀತಿಯ ಅಧಿಕೃತ ಆದೇಶ ಬರದಿದ್ದರೂ ಕೂಡ ಅಧಿಕಾರಿಗಳು ಮಾತ್ರ ಆಗಾಗ ರೈತರನ್ನು ಬೆದರಿಸುವುದು ಹಾಗೂ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡುವುದು ನಡೆದಿದೆ.
ಸಣ್ಣ ಬೆಳಗಾರರಿಗೆ ತೊಂದರೆ ನೀಡದಂತೆ ಹಾಗೂ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಇಂಧನ ಸಚಿವರಿಗೆ ವೇದಿಕೆಯಿಂದ 2026 ಫೆಬ್ರವರಿ 23 ರಂದು ಮನವಿ ನೀಡಲಾಗಿದೆ. ಆದರೆ ಸಣ್ಣ ರೈತರ ಗಮನಕ್ಕೆ ಬಾರದಂತೆ ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಸಣ್ಣ ರೈತ ಹೆಸರಿನಲ್ಲಿ ಉಚಿತ ವಿದ್ಯುತ್ ಪೂರೈಕೆಗೆ ಸರ್ಕಾರ ಒತ್ತಾಯಿಸುವ ಬದಲಿಗೆ ವಿದ್ಯುತ್‌ಬಿಲ್‌ನ ಮೊತ್ತಕ್ಕೆ ವಿಧಿಸಿರುವ ಬಡ್ಡಿ ಮನ್ನ ಮಾಡಿರುವುದನ್ನೆ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಇಂಧನ ಸಚಿವರಿಗೆ ಅಭಿನಂದನೆ ಸಲ್ಲಿಸಿ ಸಣ್ಣ ರೈತರ ಕತ್ತು ಹಿಸುಕುವ ಪ್ರಯತ್ನ ನಡೆಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ಬೆಳೆಗಾರರಾದ ತೇಜ್ ಪಾಲ್, ಸುನಿಲ್ ಮೇಗಳಪೇಟೆ, ಪ್ರಕಾಶ್ ಬಕ್ಕಿ, ವಿರೂಪಾಕ್ಷ, ಸಚಿನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net