ಕುಡುಕರ ಮೋಜು-ಮಸ್ತಿಗೆ ಭದ್ರಾ ಮೂಲ ಅಪವಿತ್ರ

ಭದ್ರಾ ನದಿಯ ಸೇತುವ ಮೇಲ್ಬಾಗದಲ್ಲಿ ಕುಡುಕರು ಹಾಕಿರುವ ಬಾಟಲಿಗಳು
ಭದ್ರಾ ನದಿಯ ಸೇತುವ ಮೇಲ್ಬಾಗದಲ್ಲಿ ಕುಡುಕರು ಹಾಕಿರುವ ಬಾಟಲಿಗಳು
Published on
ಕಳಸ: ಮಲೆನಾಡಿನ ಹೆಬ್ಬಾಗಿಲು, ಪ್ರಕೃತಿ ಸೌಂದರ್ಯದ ಗಣಿ ಕಳಸ ತಾಲೂಕಿನಲ್ಲಿ ಇಂದು ಭಕ್ತಿ ಭಾವದ ತೀರ್ಥಗಳ ಒಡಲಲ್ಲಿ ಮದ್ಯದ ವಾಸನೆಗೆ ನಾರುತ್ತಿದೆ ! ಲಕ್ಷಾಂತರ ಜನರ ದಾಹ ನೀಗಿಸುವ, ಸಾವಿರಾರು ಜಲಚರ, ಪ್ರಾಣಿ-ಪಕ್ಷಿಗಳಿಗೆ ಅಶ್ರಯವಾಗಿರುವ ಪವಿತ್ರ ಭದ್ರಾನದಿ ಇಂದು ಕುಡುಕರ ವಿಕೃತ ಮೋಜು-ಮಸ್ತಿಗೆ ಬಲಿಯಾಗುತ್ತಿದೆ.
ಕುದುರೆಮುಖದ ಗಂಗಾಮೂಲದಲ್ಲಿ ಪವಿತ್ರವಾಗಿ ಹುಟ್ಟಿ, ಕಳಸ, ಹೊರನಾಡು, ಬಾಳೆಹೊನ್ನೂರು, ಎನ್.ಆರ್.ಪುರ ದಾಟಿ ಲಕ್ಕವಳ್ಳಿ ಜಲಾಶಯ ಸೇರುವ ಈ ಜೀವನಾಡಿಯ ಉಗಮ ಸ್ಥಾನದಲ್ಲಿಯೇ ಸಮಾಜ ಕಂಟಕರು ಮದ್ಯದ ಹೊಳೆ ಹರಿಸುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇದೇ ನೀರನ್ನು ನಂಬಿಕೊಂಡು ಲಕ್ಷಾಂತರ ಜನರು ಜೀವನ ನಡೆಸುತ್ತಿದ್ದಾರೆ. ಕೃಷಿ, ಕುಡಿಯುವ ನೀರು, ಜಾನುವಾರುಗಳ ಬದುಕು, ಪರಿಸರ ಸಮತೋಲನ ಎಲ್ಲವೂ ಈ ನದಿ ಮೇಲೆ ಅವಲಂಬಿತವಾಗಿದೆ. ಆದರೆ ಇಂತಹ ಜೀವನಾಡಿ ಉಗಮ ಪ್ರದೇಶದಲ್ಲೇ ಮದ್ಯಪಾನ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಅಸಭ್ಯ ಚಟುವಟಿಕೆಗಳು ಹೆಚ್ಚುತ್ತಿರುವುದು ಅತಂಕ ಮೂಡಿಸಿದೆ.
ಕಳಸ ಸುತ್ತಮುತ್ತ ಹರಿಯುವ ಈ ನದಿಯಲ್ಲಿ ಕೋಟಿ ತೀರ್ಥ, ರುದ್ರತೀರ್ಥ, ನಾಗತೀರ್ಥ, ಅಂಬಾತೀರ್ಥ ಹಾಗೂ ವಶಿಷ್ಠಿ ತೀರ್ಥಗಳನ್ನು ಭಕ್ತರು ಪಂಚತೀರ್ಥಗಳೆಂದು ಭಕ್ತಿಯಿಂದ ಪೂಜಿಸುತ್ತಾರೆ. ಧಾರ್ಮಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ಈ ತೀರ್ಥಗಳು ಭಕ್ತರನ್ನು ಆಕರ್ಷಿಸುತ್ತವೆ. ಆದರೆ ಇಂದು ಇದೇ ಪವಿತ್ರ ತೀರ್ಥಗಳ ಸುತ್ತಮುತ್ತ ಮದ್ಯದ ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಕಸದ ರಾಶಿಗಳು ಕಾಣಿಸುತ್ತಿವೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೋಟೆಹೊಳೆಯ ಕೋಟಿ ತೀರ್ಥ ಪ್ರದೇಶ ಈಗ ಕುಡುಕರ ಹಾಟ್‌ಸ್ಪಾಟ್ ಆಗಿ ಬದಲಾಗಿರುವುದು ಕಳವಳಕಾರಿ ಸಂಗತಿ. ಇತ್ತೀಚೆಗೆ ನಿರ್ಮಾಣಗೊಂಡಿರುವ ಹೊಸ ಸೇತುವೆ ಹಾಗೂ ಅದರ ಕೆಳಭಾಗದಲ್ಲಿರುವ ಹಳೆ ಶಿಥಿಲ ಸೇತುವೆ ಈಗ ಕುಡುಕರ ತಾಣವಾಗಿ ಪರಿಣಮಿಸಿದೆ. ಸಂಜೆಯಾಗುತ್ತಿದ್ದಂತೆ ಈ ಎರಡೂ ಸೇತುವೆಗಳ ಮೇಲೂ ಕುಡುಕರ ಗುಂಪುಗಳು ಜಮಾಯಿಸುತ್ತಿವೆ. ಅಲ್ಲೇ ಮದ್ಯಪಾನ ಮಾಡಿ ಬಾಟಲಿಗಳನ್ನು ನೇರವಾಗಿ ನದಿಗೆ ಎಸೆಯುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net