ಅಜ್ಞಾತವಾಗೇ ಉಳಿದ ಇಲ್ಲಿನ ಸುಂದರ ಪ್ರವಾಸಿ ತಾಣಗಳು

ಕುದುರೆಮುಖ ಡ್ಯಾಂ ಹಿನ್ನೀರು
ಕುದುರೆಮುಖ ಡ್ಯಾಂ ಹಿನ್ನೀರು
Published on
ಕಳಸ: ಕಳಸ ತಾಲೂಕು ಪ್ರಕೃತಿಯ ಸ್ವರ್ಗ ಎಂದೇ ಪ್ರಸಿದ್ಧ. ಎತ್ತ ನೋಡಿದರೂ ಕಣ್ಣಿಗೆ ಹಬ್ಬ ನೀಡುವ ಹಸಿರು ರಾಶಿ, ಗಿರಿ ಶಿಖರಗಳು, ಜುಳುಜುಳು ಹರಿಯುವ ನದು ಮತ್ತು ಜಲಪಾತಗಳು... ಹೀಗೆ ಸಾಲು ಸಾಲು ಪ್ರವಾಸಿ ತಾಣಗಳಿಂದ ಕಳಸ ಪ್ರವಾಸಿಗರ ಅಚ್ಚುಮೆಚ್ಚು. ಆದರೆ ಇಲ್ಲಿನ ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯ ಕೊರತೆಯಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ.
ಕ್ಯಾತನಮಕ್ಕಿ, ಮೈದಾಡಿ, ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಕುರುಂಜಲ್ ಗುಡ್ಡ, ಗಂಗಡಿ ಕಲ್ಲು, ಸುರುಮನೆ ಾಲ್ಸ್, ತೂಗು ಸೇತುವೆ, ಅಂಬಾತೀರ್ಥ ಮತ್ತು ವಿಶಾಲವಾದ ಟೀ ತೋಟಗಳು ಇಲ್ಲಿನ ಪ್ರಮುಖ ಆಕಷರ್ಣೆಗಳು. ಇಲ್ಲಿನ ಪ್ರಾಕೃತಿಕ ಸೌಂದರ್ಯ ಸವಿಯಲು ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ.
ಇಲ್ಲಿಗೆ ಬರುವ ಪ್ರವಾಸಿಗರನ್ನು ನಂಬಿಕೊಂಡು ಕಳಸದಲ್ಲಿ ಒಂದು ಬೃಹತ್ ಪ್ರವಾಸೋದ್ಯಮದ ಆರ್ಥಿಕ ಚಕ್ರ ತಿರುಗುತ್ತಿದೆ. ಹೋಂ ಸ್ಟೇಗಳು, ರೆಸಾರ್ಟ್‌ಗಳು, ಮಲೆನಾಡು ಶೈಲಿಯ ಅಂಗಡಿ ಮಳಿಗೆಗಳು, ಜೀಪ್ ಮತ್ತು ಆಟೋ ಚಾಲಕರು, ಹೋಟೆಲ್‌ಗಳು ಹೀಗೆ ಅನೇಕ ಉದ್ಯಮಗಳು ಪ್ರವಾಸಿಗರ ಆಗಮನದಿಂದಲೇ ಜೀವಂತವಾಗಿವೆ. ನೂರಾರು ಕುಟುಂಬಗಳು ಈ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿ ಜೀವನ ನಡೆಸುತ್ತಿವೆ. ಆದರೆ ಈ ಸುಂದರ ಪರಿಸರ ಮತ್ತು ಅದರ ಮೇಲೆ ಅವಲಂಬಿತರಾದ ಜನರ ಬದುಕು ಮೂಲಸೌಲಭ್ಯಗಳ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವುದು ದುರಂತ.
ಕಳಸ ತಾಲೂಕಿನ ಗಡಿಯಲ್ಲೇ ಪ್ರವಾಸಿಗರಿಗೆ ಸಿಗುವುದು ಗುಂಡಿಮಯ ರಸ್ತೆಗಳ ಸ್ವಾಗತ. ಮುಖ್ಯ ರಸ್ತೆಗಳಲ್ಲೇ ಇರುವ ಗುಂಡಿಗಳು ಪ್ರವಾಸದ ಪ್ರಾರಂಭದಲ್ಲೇ ಪ್ರವಾಸಿಗರ ಉತ್ಸಾಹಕ್ಕೆ ಕುಂದು ತರುತ್ತಿವೆ. ಹೆಚ್ಚಿನ ಪ್ರವಾಸಿ ತಾಣಗಳಿಗೆ ತಲುಪಲು ಜೀಪ್ ಹೊರತುಪಡಿಸಿ ಬೇರೆ ವಾಹನಗಳು ಸಾಗಲು ಸಾಧ್ಯವಿಲ್ಲದಷ್ಟು ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಅಂಬಾತೀರ್ಥ, ಕ್ಯಾತನಮಕ್ಕಿಯಂತ ಅದ್ಭುತ ಪ್ರವಾಸಿ ತಾಣಗಳಿಗೆ ತೆರಳುವ ರಸ್ತೆಗಳ ಪರಿಸ್ಥಿತಿಯಂತೂ ಹೇಳತೀರದು. ಪ್ರವಾಸಿ ಸ್ಥಳಗಳಲ್ಲಿ ಕುಡಿಯುವ ನೀರು ಮತ್ತು ಶೌಚಗೃಹ ಸೌಲಭ್ಯ ಸಂಪೂರ್ಣ ಮರೀಚಿಕೆ. ಪ್ರವಾಸಿಗರು ಗಂಟೆಗಟ್ಟಲೆ ಪ್ರಯಾಣಿಸಿದ ನಂತರವೂ ಸೂಕ್ತ ಸೌಕರ್ಯಗಳಿಲ್ಲದೆ ಬೇಸರ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಇದು ಕಳಸದ ಪ್ರವಾಸೋದ್ಯಮಕ್ಕೆ ಅಂಟಿದ ಬಹುದೊಡ್ಡ ಕಪ್ಪು ಚುಕ್ಕಿ.
ಪ್ರವಾಸೋದ್ಯಮ ಇಲಾಖೆ ಕೈಜೋಡಿಸಲಿ
ಕಳಸದ ಪ್ರವಾಸೋದ್ಯಮ ಸ್ಥಳೀಯರಿಗೆ ಬದುಕು ನೀಡುವ ಜೀವನಾಡಿ. ಸುಂದರ ಪ್ರಕೃತಿಯ ಈ ತಾಣಕ್ಕೆ ಸುಸಜ್ಜಿತ ರಸ್ತೆಗಳು, ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಗೃಹಗಳು, ಸರಿಯಾದ ಸೂಚನಾ ಲಕಗಳು ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಒದಗಿಸುವ  ತುರ್ತು ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಸ್ಥಳೀಯ ಉದ್ಯಮಿಗಳು ಮತ್ತು ಪ್ರವಾಸಿಗರೊಂದಿಗೆ ಕೈಜೋಡಿಸಿ ಕಳಸವನ್ನು ನಿಜವಾದ ಅಂತಾರಾಷ್ಟ್ರಿಯ ಮಟ್ಟದ ಪ್ರವಾಸಿ ತಾಣವಾಗಿ ರೂಪಿಸಬೇಕು. ಪ್ರಕೃತಿಗೆ ವರದಾನವಾದ ಕಳಸವನ್ನು ಮೂಲಸೌಕರ್ಯ ಕೊರತೆಯಿಂದ ಕಪ್ಪು ಚುಕ್ಕಿ ಬೀಳದಂತೆ ಮಾಡುವುದು ಪ್ರವಾಸೋದ್ಯಮ ಇಲಾಖೆಯ ಕರ್ತವ್ಯವಾಗಬೇಕು.

ಆದಾಯವಿದ್ದರೂ ಸೌಲಭ್ಯ ಕೊರತೆ

ಕಳಸದ ಸುರುಮನೆ ಜಲಪಾತ ಮತ್ತು ಕ್ಯಾತನಮಕ್ಕಿಗೆ ತೆರಳಬೇಕಾದರೆ ಕಲಶೇಶ್ವರ ಗ್ರಾಮ ಅರಣ್ಯ ಸಮಿತಿಯಿಂದ ಪ್ರವೇಶ ಶುಲ್ಕ ತೆಗೆದುಕೊಳ್ಳಲಾಗುತ್ತಿದೆ. ಆದರೆ ಇದರಿಂದ ಲಕ್ಷಾಂತರ ರೂ. ಆದಾಯ ಬರುತ್ತಿದ್ದರೂ ಅಲ್ಲಿ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗರಿಗೆ ತಾಣಗಳನ್ನು ಹುಡುಕಲು ಸರಿಯಾದ ಮಾರ್ಗದರ್ಶನ ನೀಡುವ ಸೂಚನಾ ಲಕಗಳಿಲ್ಲ. ನದಿ, ಜಲಪಾತ ಮತ್ತು ತೂಗುಸೇತುವೆಯಂತಹ ಅಪಾಯಕಾರಿ ಸ್ಥಳಗಳಲ್ಲಿ ಯಾವುದೇ ಸೂಚನಾ ಲಕಗಳಿಲ್ಲ. ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ಅಥವಾ ಸಹಾಯವಾಣಿ ಇಲ್ಲದೆ ಪ್ರವಾಸಿಗರು ತೊಂದರೆಗೆ ಸಿಲುಕಿದರೆ ಅವರನ್ನು ಹೊತ್ತುಕೊಂಡು ಬಂದಿರುವ ಹಲವು ಉದಾಹರಣೆಗಳಿವೆ.

ಗೌಪ್ಯವಾಗಿ ಉಳಿದ ಪ್ರವಾಸಿ ತಾಣಗಳು

ಕಳಸ ತಾಲೂಕಿನಲ್ಲಿ ಇನ್ನೂ ಅನೇಕ ಅದ್ಭುತ ಪ್ರವಾಸಿ ತಾಣಗಳು ಪ್ರಚಾರಕ್ಕೆ ಬಾರದೆ ಗೌಪ್ಯವಾಗಿ ಉಳಿದಿವೆ. ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯದಿಂದ ಈ ಗುಪ್ತ ರತ್ನಗಳು ಪ್ರವಾಸಿ ನಕ್ಷೆಯಲ್ಲಿ ಕಾಣಿಸಿಕೊಳ್ಳದೆ ಅವಕಾಶಗಳಿಂದ ವಂಚಿತವಾಗಿವೆ. ಪ್ರಕೃತಿ ಆಧಾರಿತ ತಾಣಗಳು ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸೌಲಭ್ಯಗಳ ಕೊರತೆ ನಡುವೆಯೇ ಪ್ರವಾಸಿ ತಾಣಗಳ ಮಧ್ಯೆ ಎಸೆದಿರುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರ ತ್ಯಾಜ್ಯಗಳು ಕಳಸದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಸುತ್ತಲಿನ ಶುದ್ಧ ಪ್ರಕೃತಿ ಮಧ್ಯದಲ್ಲಿ ತ್ಯಾಜ್ಯದ ರಾಶಿಗಳು ಪ್ರವಾಸಿಗರನ್ನು ಮುಜುಗರಕ್ಕೆ ಈಡುಮಾಡುತ್ತವೆ. ಸೂಕ್ತ ಕಸ ವಿಲೇವಾರಿ ಮತ್ತು ನಿರ್ವಹಣಾ ವ್ಯವಸ್ಥೆ ಇಲ್ಲದಿರುವುದು ಪರಿಸರಕ್ಕೆ ದೊಡ್ಡ ಹಾನಿ ಉಂಟುಮಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net