ಬಾಳೆಹೊನ್ನೂರು: ಜವಾಹರ ನವೋದಯ ವಿದ್ಯಾಲಯ ಕೇಂದ್ರ ಸರ್ಕಾರದ ವಿದ್ಯಾ ಸಂಸ್ಥೆಯಾಗಿದ್ದು, ಇಲ್ಲಿರುವ ಕೆಲವು ಸಮಸ್ಯೆಗಳಿಗೆ ನಾವು ಪರಿಹಾರದ ಭಾಗವಾಗ ಬೇಕೆ ಹೊರತು ನಾವು ಸಮಸ್ಯೆಗೆ ದಾರಿಯಾಗ ಬಾರದು ಎಂದು ಸಂಸದ ಕೋಟಾ ಶ್ರೀ ನಿವಾಸ ಪೂಜಾರಿ ಹೇಳಿದರು.
ಸೀಗೋಡು ಪಿಎಂ ಶ್ರೀಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಪೋಷಕ-ಶಿಕ್ಷಕ ಪರಿಷತ್ ಸಭೆಯಲ್ಲಿ ಮಾತನಾಡಿ, ಒಂದು ಕಾಲದಲ್ಲಿ ನವೋದಯ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಲು ಬಹಳಷ್ಟು ಬೇಡಿಕೆಯಿತ್ತು. ಆದರೆ ಇಂದು ದೇಶದಲ್ಲಿ ಶಾಲೆಗಳ ಸಂಖ್ಯೆ ಹೆಚ್ಚಾದ ಕಾರಣ ಪಾಲಕರಲ್ಲಿ ನಿರಾಸಕ್ತಿ ಹೆಚ್ಚಾಗಿದೆ.
ನವೋದಯ ವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ದೊರಕಬೇಕು. ಮೂಲಭೂತ ಸೌಕರ್ಯ ಇರಬೇಕು. ಮಕ್ಕಳು ಹಾಗೂ ಪಾಲಕರಲ್ಲಿ ನವೋಯದ ವಿದ್ಯಾಲಯಕ್ಕೆ ಸೇರಿಸಬೇಕು ಎಂಬ ಭಾವನೆ ಮೂಡಬೇಕು. ಆ ನಿಟ್ಟಿನಲ್ಲಿ ವಿದ್ಯಾಲಯ ಕೆಲಸ ಮಾಡಬೇಕು. ಪಾಲಕರು, ಶಿಕ್ಷಕರು ಪರಸ್ಪರ ಸಹಕಾರದಿಂದ ಸಂವಹನ ಮಾಡಿಕೊಂಡು ಬಂದರೆ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ದೊರೆಯುವ ಜತೆಗೆ ಸಂಸ್ಥೆಗೂ ಉತ್ತಮ ಹೆಸರು ಬರಲಿದೆ ಎಂದರು.
ವಿದ್ಯಾರ್ಥಿಗಳಲ್ಲಿ ದೇಶ ನನ್ನದು ಎಂಬ ಭಾವನೆ ಮೂಡಲು ನವೋದಯ ವಿದ್ಯಾಲಯ ಮೆಟ್ಟಿಲಾಗಬೇಕಿದೆ. ಶಾಲೆಯಲ್ಲಿ ಕೆಲವು ಮೂಲಭೂತ ಸೌಲಭ್ಯಗಳ ಕೊರತೆಯಿದೆ ಎಂಬ ದೂರುಗಳು ಪಾಲಕರಿಂದ ಬಂದಿದ್ದು, ಈ ವಿಚಾರದಲ್ಲಿ ಚರ್ಚೆ ಆದಾಗ ಕೊನೆಯಲ್ಲಿ ನ್ಯಾಯಯುತ ತೀರ್ಮಾನ ಹೊರ ಬರಬೇಕು. ವಿದ್ಯಾಲಯದ ಕುರಿತು ಯಾವುದೇ ಸಮಸ್ಯೆ ಎದುರಾದಾಗ ಪೋಷಕ -ಶಿಕ್ಷಕ ಪರಿಷತ್ತಿನಲ್ಲಿ ಬಗೆಹರಿಸುವ ಕೆಲಸವಾಗಬೇಕು. ಅಲ್ಲಿ ಸಾಧ್ಯವಾಗದಿದ್ದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ನಾನು ಮಧ್ಯಪ್ರವೇಶಿಸಬೇಕಾಗಲಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ನಿರ್ಮಾಣವಾಗಿ, ಶಾಲೆಯನ್ನು ಆದರ್ಶಮಯವಾಗಿ ಮಾಡಬೇಕಿದೆ. ಇತರೆ ಶಾಲೆಗಳಿಗೆ ನವೋದಯ ವಿದ್ಯಾಲಯ ಮಾದರಿಯಾಗಿರಬೇಕು ಎಂದರು.