ಸಮಯಕ್ಕೆ ಸರಿಯಾಗಿ ಬನ್ನಿ, ಇದು ಕಾಟಚಾರದ ಸಭೆಯಲ್ಲ

ಎನ್.ಆರ್.ಪುರದಲ್ಲಿ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು.
ಎನ್.ಆರ್.ಪುರದಲ್ಲಿ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು.
Published on
ಎನ್.ಆರ್.ಪುರ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಬೇಕು. 11.30 ಆದರೂ ಬರುವುದಿಲ್ಲ, ಇದು ಕಾಟಾಚಾರದ ಸಭೆಯಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಸಭೆಗೆ 11.30 ಆದರೂ ಬಾರದೆ ಇಲಾಖೆಗಳ ಪ್ರಗತಿ ವರದಿಯನ್ನು ನೇರವಾಗಿ ಸಭೆಗೆ ತಂದು ಕೊಟ್ಟಿರುವುದು ಸರಿಯಲ್ಲ. ಸಭೆಯಲ್ಲಿ ಅಧಿಕಾರಿಗಳು ನೀಡುವ ಮಾಹಿತಿಯನ್ನು ನಾವು ಫಲಾನುಭವಿಗಳಿಗೆ ನೀಡಬೇಕಾಗುತ್ತದೆ. ನೀವೆ ಸಭೆಗೆ ತಡವಾಗಿ ಬರುವುದು, ಪ್ರಗತಿ ವರದಿ ಸಲ್ಲಿಸದಿರುವುದು ಸರಿಯಲ್ಲ ಎಂದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿ, ಫಲಾನುಭವಿಗಳಿಗೆ ಡಿಬಿಟಿ ಆಗದಿರುವುದು, ಇನ್ನಿತರೆ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಂಡು ಅದನ್ನು ಫಲಾನುಭವಿಗಳಿಗೆ ವಿವರಿಸಬೇಕಾಗಿರುತ್ತದೆ. ಈ ರೀತಿ ಪುರಾವರ್ತನೆಯಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಕಾರ್ಡ್‌ಗಳ ತಿದ್ದುಪಡಿ, ಸೇರ್ಪಡೆ, ವಿಳಾಸ ಬದಲಾವಣೆಗೆ ಇದ್ದ ಕಾಲಾವಕಾಶ ಮುಗಿದಿದೆ. ಇನ್ನು ಯಾವುದೇ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಮೇ ಅಂತ್ಯದೊಳಗೆ ಅಂತ್ಯೋದಯ ಕಾರ್ಡ್‌ದಾರರಿಗೆ ಕೇಂದ್ರ ಮತ್ತು ರಾಜ್ಯದಿಂದ 199.95 ಒಟ್ಟು 934.25 , ಬಿಪಿಎಲ್ ಕಾರ್ಡ್‌ದಾರರಿಗೆ ಒಟ್ಟು 4982.00 ಕ್ವಿಂಟಾಲ್ ಅಕ್ಕಿ ಹಂಚಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿ ಸುರೇಶ್‌ನಾಯ್ಕ ಮಾತನಾಡಿ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಚಿಕ್ಕಮಗಳೂರು ತಾಲೂಕಿನಲ್ಲಿ ಮಾರ್ಚ್ ಅಂತ್ಯದವರೆಗೆ ಒಟ್ಟು 1.16 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇಲಾಖೆಗೆ 43.85 ಕೋಟಿ ರೂ. ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net