ಸ್ನೇಹಿತರನ್ನು ಆಯ್ಕೆಮಾಡಿಕೊಳ್ಳುವಾಗ ಎಚ್ಚರವಹಿಸಿ

ಬೇರುಗಂಡಿ ಬೃಹನ್ಮಠದಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯ, ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಸೋಮೇಗೌಡ ಉದ್ಘಾಟಿಸಿದರು.
ಬೇರುಗಂಡಿ ಬೃಹನ್ಮಠದಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯ, ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಸೋಮೇಗೌಡ ಉದ್ಘಾಟಿಸಿದರು.
Published on
ಆಲ್ದೂರು: ಪ್ರತಿಭೆಗಳು ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಬೆಳಗುತ್ತವೆ. ಸಾಧನೆ ಸಾಧಕನ ಸ್ವತ್ತು ಎಂದು ಆಲ್ದೂರು ವೃತ್ತ ನಿರೀಕ್ಷಕ ಪಿ.ಪಿ.ಸೋಮೇಗೌಡ ಹೇಳಿದರು.
ಬೇರುಗಂಡಿ ಬೃಹನ್ಮಠದಲ್ಲಿ ಏರ್ಪಡಿಸಿದ್ದ ರೇಣುಕಾಚಾರ್ಯ, ಬಸವೇಶ್ವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಉತ್ತಮ ಪುಸ್ತಕ, ಒಬ್ಬ ಉತ್ತಮ ಗೆಳೆಯನಂತೆ ನಮ್ಮ ಬದುಕನ್ನು ಸರಿದಾರಿಯಲ್ಲಿ ಕರೆದೊಯ್ಯುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಸ್ನೇಹಿತರ ಆಯ್ಕೆಯಲ್ಲಿ ಎಚ್ಚರವಿರಬೇಕು. ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿ ಜತೆಗೆ ಅವರ ನಡತೆ, ನಡವಳಿಕೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸಮಾಜದ ಮುಖಂಡ ಬಿ.ಬಿ.ರೇಣುಕಾರ್ಯ ಮಾತನಾಡಿ, ಇಂದು ವೀರಶೈವ ಲಿಂಗಾಯತ ಸಮಾಜದಿಂದ ರೇಣುಕಾಚಾರ್ಯ, ಬಸವಣ್ಣ ಅವರ ಜಯಂತಿ ಆಚರಿಸಲಾಗುತ್ತಿದೆ. ಈ ಇಬ್ಬರೂ ಮಹನೀಯರು ಜಗತ್ತಿಗೆ ಬೆಳಕನ್ನು ನೀಡಿದವರು. ಅವರ ಜೀವನ, ಸಂದೇಶಗಳು ನಮ್ಮ ಬದುಕಿಗೆ ಮಾರ್ಗದರ್ಶಿ. ಅವರ ತತ್ವಾದರ್ಶಗಳು ಕೇವಲ ವೇದಿಕೆ ಭಾಷಣಕ್ಕೆ ಸೀಮಿತವಾಗದೆ ನಮ್ಮ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದರು.
ಬೇರುಗಂಡಿ ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ಇಬ್ಬರೂ ವಿಭೂತಿ ಪುರುಷರ ಜನ್ಮ ಜಯಂತಿ ಆಚರಿಸಲಾಗುತ್ತಿದೆ. ಮನುಷ್ಯನಿಗೆ ಬದುಕಲು ಧರ್ಮ ಬೇಕು. ಧರ್ಮದ ಬೇರು ಸದೃಢವಾಗಿದ್ದಾಗ ಮಾತ್ರ ಬದುಕು ಸುಂದರವಾಗಿರುತ್ತದೆ. ಮನುಷ್ಯನಲ್ಲಿರುವ ದುಷ್ಟ ಶಕ್ತಿ ನಾಶ ಮಾಡಲು ಗುರುಗಳು, ಸಾಧು ಸಂತರು, ವಿಭೂತಿ ಪುರುಷರ ಸಂದೇಶಗಳಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳಿಗೆ ನಾಡು, ಧರ್ಮ, ಸಂಸ್ಕಾರ, ಪರಂಪರೆ, ಸಮಾಜ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ವೀರಶೈವ ಸಮಾಜದ ಹೋಬಳಿ ಅಧ್ಯಕ್ಷ ಎ.ಎಸ್.ಮಹೇಶ್, ಕಾರ್ಯದರ್ಶಿ ಹರೀಶ್, ಖಜಾಂಚಿ ಗಂಗಾಧರ್, ಉಪಾಧ್ಯಕ್ಷ ಭಗತ್, ಕುಮಾರ್, ಸಂಘಟನಾ ಕಾರ್ಯದರ್ಶಿ ವಸಂತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net