ಶೃಂಗೇರಿ: ಜಮೀನು ನಿರ್ವಹಣೆಯಲ್ಲಿ ಕಳೆ ನಿರ್ವಹಣೆ ಪ್ರಮುಖವಾಗಿದ್ದು, ಕಳೆ ಕಟಾವಿಗೆ ಸುಧಾರಿತ ಯಂತ್ರ ಆವಿಷ್ಕರಿಸಿದ್ದು, ಹೊಸ ತಂತ್ರಜ್ಞಾನದೊಂದಿಗೆ ಸಿದ್ಧಪಡಿಸಿರುವ ಯಂತ್ರ ರೈತರಿಗೆ ಉಪಯುಕ್ತವಾಗಿದೆ ಎಂದು ಚನ್ನಗಿರಿ ಪಿಜಿ ಸಂಘದ ಸಂಸ್ಥಾಪಕ ಸಂತೋಷ್ ಹೇಳಿದರು.
ಮೆಣಸೆ ಗ್ರಾಪಂ ಕೆರೆಮನೆ ಭಾಸ್ಕರ ರಾವ್ ತೋಟದಲ್ಲಿ ಏರ್ಪಡಿಸಿದ್ದ ರೋಬಟಿಕ್ ವೀಡ್ ಕಟರ್ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು. ಈಗ ಬಳಕೆಯಲ್ಲಿರುವ ಕಳೆ ಕೊಚ್ಚುವ ಯಂತ್ರ ಅಲ್ಪ ಜಾಗದ ಕಳೆ ತೆಗೆಯುತ್ತದೆ. ಹೊಸಯಂತ್ರ ಐದು ಕಾರ್ಮಿಕರು ಮಾಡುವ ಕೆಲಸ ಮಾಡುತ್ತದೆ. ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ. ಇಳಿಜಾರು ಹಾಗೂ ಬಸಿಗಾಲುವೆ ಇದ್ದ ತೋಟದಲ್ಲಿ ಸುಲಭವಾಗಿ ಕಾರ್ಯ ನಿರ್ವಹಿಸುತ್ತದೆ. ರಿಮೋಟ್ ಮೂಲಕ ಸುಲಭವಾಗಿ ನಿರ್ವಹಿಸುವ ಯಂತ್ರವನ್ನು ಒಬ್ಬರೇ ನಿರ್ವಹಿಸಬಹುದಾಗಿದೆ ಎಂದರು.
ರೈತಮಿತ್ರ ಕೂಟದ ಕೆರೆಮನೆ ಭಾಸ್ಕರ ರಾವ್ ಮಾತನಾಡಿ, ಬಯಲು ಸೀಮೆಗೆ ಹೊಂದುವ ಹೊಸ ಯಂತ್ರಗಳು ಮಾರುಕಟ್ಟೆಗೆ ಬರುತ್ತಿದ್ದು, ಈ ಯಂತ್ರ ಮಲೆನಾಡಿನ ತೋಟಗಳಿಗೂ ಸಹಾಯಕವಾಗಬಹುದಾಗಿದೆ. ಕಾರ್ಮಿಕರ ಕೊರತೆ ನೀಗಿಸಲು ರೈತರು ಯಾಂತ್ರೀಕರಣಕ್ಕೆ ಹೊಂದಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.