ಬಾಳೆಹೊನ್ನೂರು ಮಾರ್ಕೆಟ್ ರಸ್ತೆ ತಡೆಗೋಡೆ ಕಾಮಗಾರಿ ಪರಿಶೀಲನೆ

ಬಾಳೆಹೊನ್ನೂರಿನ ಸಂತೆ ಮಾರ್ಕೆಟ್ ರಸ್ತೆಯ ತಡೆಗೋಡೆ ಕಾಮಗಾರಿಯನ್ನು ಶಾಸಕ ಟಿ.ಡಿ.ರಾಜೇಗೌಡ ಪರಿಶೀಲಿಸಿದರು.
ಬಾಳೆಹೊನ್ನೂರಿನ ಸಂತೆ ಮಾರ್ಕೆಟ್ ರಸ್ತೆಯ ತಡೆಗೋಡೆ ಕಾಮಗಾರಿಯನ್ನು ಶಾಸಕ ಟಿ.ಡಿ.ರಾಜೇಗೌಡ ಪರಿಶೀಲಿಸಿದರು.
Published on
ಬಾಳೆಹೊನ್ನೂರು: ಪಟ್ಟಣದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಮಾರ್ಕೆಟ್ ರಸ್ತೆ ಧರೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಟಿ.ಡಿ.ರಾಜೇಗೌಡ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರಿನ ಮಾರ್ಕೆಟ್ ರಸ್ತೆ ಮಳೆಗಾಲದಲ್ಲಿ ಕುಸಿಯುವ ಹಿನ್ನೆಲೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದೆ. 2019ರಲ್ಲಿ ಧಾರಾಕಾರ ಮಳೆ ಬಂದಾಗ ಸಂತೆ ಮಾರುಕಟ್ಟೆ ಹಾಗೂ ಮಾರ್ಕೆಟ್ ರಸ್ತೆ ಸಂಪೂರ್ಣ ಭದ್ರಾನದಿ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಪ್ರತೀ ವರ್ಷ ಹೆಚ್ಚು ಮಳೆಯಾದಾಗ ನೀರು ನಿಂತು ಅದರ ತೇವದಿಂದ ಮಾರ್ಕೆಟ್ ರಸ್ತೆ ಧರೆಯು ಕುಸಿಯುತ್ತದೆ. ಇದರಿಂದ ಬೈಪಾಸ್ ರಸ್ತೆಯು ಕಡಿತಗೊಳ್ಳುವ ಭೀತಿ ಎದುರಾಗಿತ್ತು. ಇದರೊಂದಿಗೆ ಡೋಬಿಹಳ್ಳದ ಹರಿವು ಹೆಚ್ಚಾಗುವಂತೆ ಅಗಲೀಕರಣಗೊಳಿಸಿ ಹಳ್ಳದ ದಂಡೆ ಬದಿಯಲ್ಲೂ ತಡೆಗೋಡೆ ಮಾಡಲಾಗಿದೆ. ಎನ್‌ಡಿಆರ್‌ಎ್ ನಿಧಿಯಿಂದ ಕಾಮಗಾರಿ ಮಾಡಿಸಲಾಗುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಗುತ್ತಿಗೆದಾರರು, ಇಂಜಿನಿಯರ್‌ಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಎಪಿಎಂಸಿಯಿಂದ 1ಕೋಟಿ ರೂ.ವೆಚ್ಚದಲ್ಲಿ ಪಟ್ಟಣದಲ್ಲಿ ಸಂತೆ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗಿತ್ತು. ಮಳೆಗಾಲದಲ್ಲಿ ಪ್ರವಾಹದ ನೀರು ಬಂದು ತ್ಯಾಜ್ಯ ವಸ್ತುಗಳು, ಮಣ್ಣು ಈ ಪ್ರದೇಶದಲ್ಲಿ ನಿಲ್ಲುತ್ತಿದ್ದರಿಂದ ಸಂತೆ ನಡೆಸಲು ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಮತ್ತು ಗ್ರಾಪಂನವರು ಸಂತೆ ನಡೆಯುವ ಸ್ಥಳವನ್ನು ರಸ್ತೆ ಮಟ್ಟಕ್ಕೆ ಏರಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದ್ದು, ಅಂದಾಜು 4 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮಟ್ಟಕ್ಕೆ ಸ್ಲಾೃಬ್ ಹಾಕಿಕೊಡುವ ಉದ್ದೇಶವಿದೆ. ಈ ಕಾಮಗಾರಿ ನಡೆದಲ್ಲಿ ಉತ್ತಮ ಸಂತೆ ಮಾರುಕಟ್ಟೆ ಸಂಕೀರ್ಣ ನಿರ್ಮಾಣವಾಗಲಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರವಿಚಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net