ಅಸಮಾನತೆ ವಿರುದ್ಧ ಕೀರ್ತನೆ ಮೂಲಕ ಜಾಗೃತಿ

ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.
Published on
ಎನ್.ಆರ್.ಪುರ: ಕನಕದಾಸರು ಮೂಢನಂಬಿಕೆ, ಅಸಮಾನತೆ ವಿರುದ್ಧ ಕೀರ್ತನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು ಎಂದು ತಾಲೂಕು ಕುರುಬ ಸಮಾಜದ ಮುಖಂಡ ಜಿ.ಪುರುಷೋತ್ತಮ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕನಕ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಜನರಿಗೆ ತಿಳಿವಳಿಕೆ ಮೂಡಿಸಿದರು ಎಂದರು.
15-16ನೇ ಶತಮಾನದಲ್ಲಿ ದಾಸ ಸಾಹಿತ್ಯದ ಪರಂಪರೆ ಪ್ರಾರಂಭವಾಯಿತು. ಕನಕದಾಸರ ಮೊದಲ ಹೆಸರು ತಿಮ್ಮಪ್ಪ. ಕನಕದಾಸರು ಉಡುಪಿ ಕೃಷ್ಣನ ದರ್ಶನಕ್ಕೆ ಬಂದಾಗ ಅವರಿಗೆ ಕೃಷ್ಣನ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಯಿತು. ಆಗ ಕನಕದಾಸರು ದೇವಸ್ಥಾನದ ಸುತ್ತ ತಿರುಗುತ್ತ ಕೀರ್ತನೆ ಹಾಡುತ್ತಿದ್ದಾಗ ಕೃಷ್ಣನೇ ತಿರುಗುತ್ತಾನೆ. ಅಲ್ಲಿ ಕಿಂಡಿಯೊಂದು ನಿರ್ಮಾಣವಾಗಿ ಕೃಷ್ಣನು ಕನಕದಾಸರಿಗೆ ದರ್ಶನ ನೀಡಿದ್ದ ಎಂಬ ಐತಿಹ್ಯವಿದೆ. ನಮ್ಮ ಜೀವನದ ಅವಧಿಯಲ್ಲಿ ಸಮಾಜ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಕಾರ್ಯ ಮಾಡಿದರೆ ಮಾತ್ರ ಇತಿಹಾಸ ಪುರುಷರ ಸಾಲಿಗೆ ಸೇರಬಹುದು ಎಂದು ತಿಳಿಸಿದರು.
ಶಿಕ್ಷಕ ಹಿರೇನಲ್ಲೂರು ಶ್ರೀನಿವಾಸ್ ಮಾತನಾಡಿ, ಚಿತ್ರದುರ್ಗದಲ್ಲಿ ಮದಕರಿ ನಾಯಕ ಆಳ್ವಿಕೆ ನಡೆಸುತ್ತಿದ್ದಾಗ ಹೈದರಾಲಿಯು ಸೈನ್ಯ ಕಟ್ಟಿಕೊಂಡು ದಾಳಿಗೆ ಬಂದಾಗ ಕೋಟೆ ಕಾವಲು ಕಾಯುತ್ತಿರುವ ಒನಕೆ ಓಬವ್ವ ಸಾಹಸ ಮೆರೆದಳು. ಗಂಡ ಊಟ ಮಾಡುತ್ತಿದ್ದ ವೇಳೆ ಸಣ್ಣ ಕಿಂಡಿಯೊಳಗಿನಿಂದ ಹೈದರಾಲಿ ಸೈನಿಕರು ಒಬ್ಬೊಬ್ಬರಾಗಿ ಕೋಟೆಯೊಳಗೆ ನುಗ್ಗುತ್ತಿದ್ದಾಗ ಓಬವ್ವ ಒನಕೆಯಿಂದ ಒಬ್ಬೊಬ್ಬರನ್ನೇ ಕೊಂದು ಸೈನ್ಯವನ್ನು ನಾಶ ಮಾಡಿ ಚಿತ್ರದುರ್ಗದ ಕೋಟೆ ರಕ್ಷಣೆ ಮಾಡಿದಳು. ಕೋಟೆ ರಕ್ಷಣೆ ಮಾಡಿದ ಓಬವ್ವ ಮತ್ತೆ ಮೂರು ವರ್ಷ ಬದುಕುತ್ತಾಳೆ. ಮದಕರಿ ನಾಯಕ ಒನಕೆ ಓಬವ್ವಳ ನೆನಪಿನಲ್ಲಿ ಮತ್ತೆ ಮೂರು ಕೋಟೆ ಕಟ್ಟಿ ಓಬವ್ವಳನ ಕಿಂಡಿ ಎಂದು ನಾಮಕರಣ ಮಾಡುತ್ತಾನೆ. ಅಗಸದ ಕಲ್ಲು ಎಂಬ ಊರಿನಲ್ಲಿ ಒನಕೆ ಓಬವ್ವಳ ಹೆಸರಿನಲ್ಲಿ ದೇವಸ್ಥಾನ ಕಟ್ಟಲಾಗಿದೆ ಎಂದು ವಿವರಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಒನಕೆ ಓಬವ್ವ ಎಲ್ಲ ಮಹಿಳೆಯರಿಗೆ ಆದರ್ಶವಾಗಿದ್ದಾಳೆ. ಹಿಂದಿನ ಸಾಧಕರ ಆದರ್ಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ಪಿಎಸ್‌ಐ ನಿರಂಜನ್ ಗೌಡ, ತಹಸೀಲ್ದಾರ್ ಡಾ. ನೂರುಲ್‌ಹುದಾ, ಜಿಲ್ಲಾ ಎಸ್ಸಿ, ಎಸ್ಟಿ ದೌರ್ಜನ್ಯ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಎಂ.ಮಹೇಶ್, ಚಲವಾದಿ ಮಹಾಸಭಾ ಕ್ಷೇತ್ರ ಅಧ್ಯಕ್ಷ ಡಿ.ರಾಮು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net