ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ

ಕ್ರೈಂ
ಕ್ರೈಂ
Published on
ಚಿಕ್ಕಮಗಳೂರು: ಕಾಫಿನಾಡಿನ ಹೃದಯ ಭಾಗದಲ್ಲಿರುವ ಎಸ್ಪಿ ಮತ್ತು ಡಿಸಿ ಕಚೇರಿ ಪಕ್ಕದಲ್ಲೇ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಕನೋರ್ವ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕಡೂರು ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ಚಿಕ್ಕಮಗಳೂರಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ರೋಹಿತ್ ಯುವಕ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸು ಎಂದು ಬೆನ್ನು ಬಿದ್ದಿದ್ದ. ಆದರೆ ಅಪ್ರಾಪ್ತೆ ರೋಹಿತನ್‌ನನ್ನು ಪ್ರೀತಿ ಮಾಡಲು ಒಪ್ಪಿರಲಿಲ್ಲ ಎನ್ನಲಾಗಿದೆ.
ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಯುವಕ ಜಿಲ್ಲಾ ಕ್ರೀಡಾಂಗಣದಲ್ಲಿ ಆಕೆಯನ್ನು ನೆಲಕ್ಕೆ ಹಾಕಿ ಮನಬಂದಂತೆ ತುಳಿದು ಹಲ್ಲೆ ನಡೆಸಿದ್ದಾನೆ.
ಈ ಕ್ರೂರ ಕೃತ್ಯ ಕ್ರೀಡಾಂಗಣದಲ್ಲಿದ್ದ ಸಾರ್ವಜನಿಕರ ಕಣ್ಣಿಗೆ ಬೀಳುತ್ತಿದ್ದಂತೆ ಅವರು ತಕ್ಷಣವೇ ಬಾಲಕಿಯ ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರು ಓಡಿ ಬರುವುದನ್ನು ಕಂಡ ಪಾಗಲ್ ಪ್ರೇಮಿ ರೋಹಿತ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೂ ಬಿಡದ ಸಾರ್ವಜನಿಕರು ಆತನನ್ನು ಬೆನ್ನಟ್ಟಿ ಎಸ್ಪಿ ನಿವಾಸದ ಬಳಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಹುಚ್ಚು ಪ್ರೇಮಿಯನ್ನು ತಕ್ಷಣವೇ ಅಕ್ಕ ಪಡೆ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಯುವಕನ ಕಾಟ ಇದೇ ಮೊದಲಲ್ಲ ಎನ್ನಲಾಗಿದ್ದು, ಈ ಹಿಂದೆ ಬಾಲಕಿಯ ಮನೆ ಬಳಿಗೂ ಹೋಗಿ ಪ್ರೀತಿಸುವಂತೆ ಬೆದರಿಕೆ ಹಾಕಿದ್ದಲ್ಲದೆ, ಬಾಲಕಿಯ ಪಾಲಕರಿಗೂ ಫೋನ್‌ ಮಾಡಿ ಧಮಕಿ ಹಾಕಿದ್ದ. ಅಷ್ಟೇ ಅಲ್ಲದೇ ಬಾಲಕಿ ಉಳಿದುಕೊಂಡಿದ್ದ ಹಾಸ್ಟೆಲ್ ಬಳಿಗೂ ಬಂದು ರಂಪಾಟ ಮಾಡಿದ್ದರಿಂದ ಹಾಸ್ಟೆಲ್‌ ವಾರ್ಡನ್ ಕೂಡ ಈ ಬಗ್ಗೆ ಬಾಲಕಿಗೆ ಎಚ್ಚರಿಕೆ ನೀಡಿದ್ದರು. ಇದೀಗ ಯುವಕನ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net