ಚಿಕ್ಕಮಗಳೂರು: ನಗರದ ತಾಲೂಕು ಕಚೇರಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಸ್ಥಳದಲ್ಲಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಿರುವ ಕ್ರಮ ಖಂಡನೀಯ ಎಂದು ಆರೋಪಿಸಿ ಜಿಲ್ಲಾ ಛಲವಾದಿ ಮಹಾಸಭಾ ಪದಾಧಿಕಾರಿಗಳು ಎಡಿಸಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿದರು.
ನಗರದ ತಾಲೂಕು ಕಚೇರಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಸ್ಥಳದಲ್ಲಿ ಅನೇಕ ವರ್ಷಗಳಿಂದ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಲಾಗಿತ್ತು, ಕಳೆದ ೨೦ ದಿನಗಳ ಹಿಂದೆ ಆ ಭಾವಚಿತ್ರವನ್ನು ಅಲ್ಲಿಂದ ತೆರವುಗೊಳಿಸಲಾಗಿದ್ದು ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರವನ್ನು ತೆರವುಗೊಳಿಸಿರುವುದು ವಿಷಾದನೀಯ ಎಂದರು.
ಸಾರ್ವಜನಿಕರು ಓಡಾಡುವ ಸ್ಥಳದಲ್ಲಿದ್ದ ಭಾವಚಿತ್ರವನ್ನು ತೆರವುಗೊಳಿಸಿದವರು ಯಾರು. ಏಕೆ ತೆರವುಗೊಳಿಸಿದರು ಎಂದು ಪ್ರಶ್ನಿಸಿದ ಅವರು ಭಾವಚಿತ್ರ ತೆರವುಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತೆ ಅದೇ ಸ್ಥಳದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಬಿ. ಎಂ.ರಘು ಉಪಾಧ್ಯಕ್ಷ ನಂಜುಂಡಪ್ಪ, ಕಾರ್ಯದರ್ಶಿ ರಾಜ್ ಕುಮಾರ್, ಧರ್ಮೇಶ್, ವಿನಯ್, ಧರ್ಮರಾಜ್, ಪುಟ್ಟಸ್ವಾಮಿ, ಗಣೇಶ್, ನಾಗೇಶ್, ಸುರೇಶ್ ಹಾಜರಿದ್ದರು.