ಫಸಲ್ ಭಿಮಾ ಯೋಜನೆ ಸದುಪಯೋಗಕ್ಕೆ ಮನವಿ

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ  ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಬೆಳೆವಿಮೆ ಪ್ರಚಾರ ವಾಹನಕ್ಕೆಶಾಸಕ ಎಚ್‌.ಡಿ.ತಮ್ಮಯ್ಯ, ಎಂಎಲ್‌ಸಿ ಎಸ್‌.ಎಲ್‌.ಭೋಜೇಗೌಡ ಚಾಲನೆ ನೀಡಿದರು.
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಬೆಳೆವಿಮೆ ಪ್ರಚಾರ ವಾಹನಕ್ಕೆಶಾಸಕ ಎಚ್‌.ಡಿ.ತಮ್ಮಯ್ಯ, ಎಂಎಲ್‌ಸಿ ಎಸ್‌.ಎಲ್‌.ಭೋಜೇಗೌಡ ಚಾಲನೆ ನೀಡಿದರು.
Published on
ಚಿಕ್ಕಮಗಳೂರು: ಪ್ರಕೃತಿ ವಿಕೋಪದಿಂದ ಬೆಳೆಹಾನಿಯಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ವಿಮೆ ಮೂಲಕ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಬೆಳೆವಿಮೆ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯನ್ನು ರಾಜ್ಯ ಸರ್ಕಾರದ ಅಧಿಸೂಚನೆಯಂತೆ ರಾಜ್ಯಾದ್ಯಂತ ಏಕ ಕಾಲದಲ್ಲಿ ಜಿಲ್ಲೆಯಿಂದ ಹೋಬಳಿ ಮಟ್ಟಕ್ಕೆ ಬೆಳೆ ವಿಮೆ ಬಗ್ಗೆ ಪ್ರಚಾರ ಮಾಡುವ ಈ ಕಾರ್ಯಕ್ರಮ ಉತ್ತಮವಾಗಿದೆ ಎಂದು ಹೇಳಿದರು.
ಸರ್ಕಾರಗಳ ಸೌಲಭ್ಯಗಳು ಸಂಬಂಧಿಸಿದ ಫಲಾನುಭವಿಗಳಿಗೆ ತಲುಪಬೇಕೆಂಬುದೆ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೃಷಿ ಇಲಾಖೆಯಡಿ ಯೋಜನೆ ಬಗ್ಗೆ ಮಾಹಿತಿ ಇದೆ. ಆದರೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಹಣ ಸರಿಯಾಗಿ ದೊರೆಯುತ್ತಿಲ್ಲ ಎಂಬ ದೂರುಗಳಿದ್ದು, ಅಧಿಕಾರಿಗಳು ರೈತರ ಮನವೊಲಿಸಿ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.
ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸತ್ತಿರುವ ರೈತರಿಗೆ ಬೆಳೆ ವಿಮೆ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದಾಗ ರೈತರು ವಿಮೆ ಮಾಡಿಸಿಕೊಳ್ಳುತ್ತಾರೆ. ಜೊತೆಗೆ ಬೆಳೆ ಸಮೀಕ್ಷೆ ಮಾಡುವಾಗ ಇಲಾಖೆಯ ಮಾನದಂಡಗಳು ಗೊಂದಲಗಳಿಗೆ ಕಾರಣವಾಗುತ್ತಿದೆ ಎಂದು ವಿಷಾಧಿಸಿದರು.
ಫ್ರೂಟ್ಸ್ ಡಾಟಾದಲ್ಲಿ ತಮ್ಮ ಮಾಹಿತಿಯನ್ನು ರೈತರು ನೊಂದಾಯಿಸಿಕೊಳ್ಳಬೇಕು ಇದರಿಂದ ಬೆಳೆಗಳಿಗೆ ರಸಗೊಬ್ಬರ ಬಳಕೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಕಾರಿಗಳು ತೆಗೆದುಕೊಂಡು ಹೋಗಬೇಕೆಂದು ಸೂಚಿಸಿದರು.
ದೇಶದ ಬೆನ್ನೆಲುಬಾಗಿರುವ ರೈತನ ಬದುಕು ಹಸನುಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ಇಲಾಖೆ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಬೆಳೆವಿಮೆ, ಬಿತ್ತನೆ ಬೀಜಗಳ ಕೊರತೆ ಉಂಟಾಗದಂತೆ ಹಾಗೂ ರಸಗೊಬ್ಬರದ ಅಭಾವ ತಲೆದೋರದಂತೆ ಗಮನ ಹರಿಸಿ ಆದ್ಯತೆ ನೀಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ರೈತರ ಪಾಲಿನ ಸಂಜೀವಿನಿಯಾಗಿ ವರದಾನವಾಗಿದೆ. ಈ ಕಾರ್ಯಕ್ರಮ ಪ್ರಾರಂಭದಲ್ಲಿ ಇದ್ದ ಹತ್ತಾರು ತೊಡಕುಗಳು ಇತ್ತೀಚೆಗೆ ನಿವಾರಣೆಯಾಗಿದೆ. ಬೆಳೆಗಳಿಗೆ ಆಲಿಕಲ್ಲು ಮಳೆ, ಭೂ ಕುಸಿತ ಆದಾಗ ಪ್ರಕೃತಿ ವಿಕೋಪ ಹಾನಿ ತಡೆಗೆ ಈ ಯೋಜನೆ ಉತ್ತಮವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ವಿವಿಧ ರಾಷ್ಟ್ರೀಕೃತಬ್ಯಾಂಕುಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅಧಿಕಾರಿಗಳಿ ಆಹ್ವಾನ ನೀಡಿಲ್ಲ. ತೋಟಗಾಕೆ ಬೆಳೆಗಳು ಜಿಲ್ಲೆಯಲ್ಲಿ ಹೆಚ್ಚಿದ್ದು, ರಾಗಿ, ಜೋಳ ಬೆಳೆದವರು ವಿಮೆ ಮಾಡಿಸಲು ಮುಂದಾಗುವುದಿಲ್ಲ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ರೈತರಿಗೆ ಎದುರಾಗುವ ಸಂದಿಗ್ಧ, ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿಗೆ ಧಾವಿಸಲು ಬೆಳೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ ಎಂದರು.
ಜಿಲ್ಲೆಯ ರೈತರು ತಮ್ಮ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ನೀಡಿ ಹೆಚ್ಚಿನ ವಿವರಗಳನ್ನು ಎಫ್ ಐ ಡಿ ಮೂಲಕ ಪಡೆದು ರೈತರು ವಿಮಾ ಕಂತನ್ನು ಪಾವತಿಸುವಂತೆ ಮನವಿ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಎಚ್.ಎಸ್. ಕೀರ್ತನಾ, ಕೃಷಿ ಅಧಿಕಾರಿ ಸುಜಾತ, ನರೇಂದ್ರ, ಕುಮುದ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net