ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಜೆಪಿ ಹಾಗೂ ಯೂಥ್ ಫಾರ್ ನೇಷನ್ ಸಂಘಟನೆಯಿಂದ ಭಾರತ ವಿರೋಧಿ ಶಕ್ತಿಗಳಿಂದ ಸಂಸತ್ ಭವನಕ್ಕೆ ದಾಳಿ ಖಂಡಿಸಿ ನಡೆದ ಪ್ರತಿಭಟನ ಮೆರವಣಿಗೆಯನ್ನುದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ,ಮಾತನಾಡಿದರು. ಎಂ.ಆರ್.ದೇವರಾಜ ಶೆಟ್ಟಿ, ಕೆ.ಎಸ್.ಪುಷ್ಪರಾಜ್, ಸಂತೋಷ್ ಕೋಟ್ಯಾನ್, ಕೋಟೆ ರಂಗನಾಥ್ ಮತ್ತಿತರರಿದ್ದರು.
ಚಿಕ್ಕಮಗಳೂರು: ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಹೋರಾಟದ ರೂಪುರೇಷೆ ಗಮನಿಸಿದಾಗ ಅವರಲ್ಲಿ ಯಾವುದೇ ರೀತಿಯ ಸಕಾರಾತ್ಮಕ ಚಿಂತನೆಗಳಿವೆ ಎಂದು ಎನಿಸುತ್ತಿಲ್ಲ. ಬದಲಿಗೆ ಸ್ಥಿರ ಸರ್ಕಾರ ಹಾಗೂ ಸಮರ್ಥ ನಾಯಕತ್ವದ ವಿರುದ್ಧ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆದಿರುವ ಅನುಮಾನವಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಯೂಥ್ ಫಾರ್ ನೇಷನ್ ಸಂಘಟನೆಯಿಂದ ಭಾರತ ವಿರೋಧಿ ಶಕ್ತಿಗಳಿಂದ ಸಂಸತ್ ಭವನಕ್ಕೆ ದಾಳಿ ಖಂಡಿಸಿ ಗುರುವಾರ ಸಂಜೆ ನಗರದ ತಾಲೂಕು ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದ ವರೆಗೆ ನಡೆದ ಪ್ರತಿಭಟನ ಮೆರವಣಿಗೆಯಲ್ಲಿ ಪಾಲ್ಗೊಂಡು ಬಳಿಕ ನಡೆದ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಅರಾಜಕತೆ ಸೃಷ್ಟಿಸಬೇಕು ಎಂಬ ಸಂಚಿನ ಭಾಗವಾಗಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವನ್ನೇ ಗುರಿಯಾಗಿಸಿಕೊಂಡು ಹೋರಾಟ ಮಾಡಲಾಗುತ್ತಿದೆ. ಈ ಮೂಲಕ ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಬೆಂಬಲ ನೀಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಗುರಿಯಾಗಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಒಂದು ದಿನದ ಒಳಗಾಗಿ ದೂರು ದಾಖಲು ಮಾಡಿಕೊಂಡು ಸಿಬಿಐಗೆ ಪ್ರಕರಣ ವಹಿಸಲಾಗಿತ್ತು. ಇದಾದ ಬಳಿಕ 13 ಜನರನ್ನು ಬಂಧಿಸಲಾಗಿದ್ದು, ಇಂದಿಗೂ ಅವರು ಜೈಲಿನಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ತ್ವರಿತವಾಗಿ ಆರೋಪಿಗಳಿಗೆ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ ವಿಪಕ್ಷಗಳು ಉದ್ದೇಶಪೂರ್ವಕವಾಗಿ ಹೋರಾಟ ನಡೆಸುತ್ತಿವೆ ಎಂದು ದೂರಿದರು.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರು ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದವರಲ್ಲ. ಜೊತೆಗೆ ಶಿಕ್ಷಣ ಸಚಿವ ಧರ್ಮೇಂದ ಪ್ರಧಾನ್ ಕಚೇರಿಗೂ ಸೇರಿದವರಲ್ಲ. ಹೀಗಿರುವಾಗ ಉದ್ದೇಶಪೂರ್ವಕವಾಗಿ ಬಿಜೆಪಿ ಹಾಗೂ ಶಿಕ್ಷಣ ಸಚಿವರ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
ದೇಶಕ್ಕಾಗಿ ಕೆಲಸ ಮಾಡುತ್ತಿರುವ ದೇಶಭಕ್ತ ಪ್ರಧಾನಿ ನರೇಂದ್ರ ಮೋದಿ ಎಂಬುದು ಹೆಮ್ಮೆಯ ವಿಷಯ. ನರೇಂದ್ರ ಮೋದಿ ಅವರು ಜಗತ್ತಿನ ಉದ್ದಗಲಕ್ಕೆ ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆ ಮೊಳಗಿಸಿದ್ದಾರೆ. ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ ರಾಹುಲ್ ಗಾಂಧಿ ಅವರು ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್ ಎಡ ಪಕ್ಷಗಳು ಹಾಗೂ ಎಎಪಿ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ದೇಶದ ಜನರೇ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿಸುವ ಮೂಲಕ ತಮ್ಮ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಪ್ರಮುಖರಾದ ಕೆ.ಎಸ್. ಪುಷ್ಪರಾಜ್, ಸಂತೋಷ್ ಕೋಟ್ಯಾನ್, ಕೋಟೆ ರಂಗನಾಥ್, ಸುಜಾತ ಶಿವಕುಮಾರ್ ಮತ್ತಿತರರಿದ್ದರು.