ಮೂಡಿಗೆರೆ: ಹಳೇಮೂಡಿಗೆರೆ ಗ್ರಾಮದಲ್ಲಿ ಗೃಹ ಮಂಡಳಿಯ ಹೊಸ ಬಡಾವಣೆಯಲ್ಲಿ ನಿವೇಶನಗಳನ್ನು ಮಂಡಳಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದ್ದಾರೆ ಎಂದು ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ರಾಮಚಂದ್ರ ದೂರಿದರು.
ಆರ್ಥಿಕವಾಗಿ ಹಿಂದುಳಿದ ವರ್ಗದ ಖರೀದಿದಾರರಿಗೆ 20*30 ಅಡಿ ವಿಸ್ತೀರ್ಣದ ನಿವೇಶನ ಪ್ರತಿ ಚದರಡಿ ಜಾಗಕ್ಕೆ 500 ರೂ. ರಂತೆ ನಿಗದಿಪಡಿಸಿ, ಚಿಕ್ಕಮಗಳೂರಿನ ಗೃಹ ಮಂಡಳಿ ಅಧಿಕಾರಿಗಳು ಅರ್ಜಿ ಸ್ವೀಕರಿಸಿದ್ದರು. 18 ತಿಂಗಳಲ್ಲಿ ನಿವೇಶನ ಒದಗಿಸುವುದಾಗಿ ಆರಂಭದಲ್ಲಿ ತಿಳಿಸಿದ್ದರು. ನಿವೇಶನ ಹಂಚಿಕೆಯಾಗದಿದ್ದರೆ ಬಡ್ಡಿ ಸಮೇತ ಕಟ್ಟಿದ ಎಲ್ಲ ಹಣ ಪಾಪಸ್ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಅಧಿಕಾರಿಗಳ ಭರವಸೆ ಸುಳ್ಳಾಗಿದೆ. ಅವರು ನಿಗದಿಪಡಿಸಿದ ಸಮಯದಲ್ಲಿ ನಿವೇಶನವನ್ನು ಖರೀದಿದಾರರಿಗೆ ನೀಡಲಿಲ್ಲ. ಠೇವಣಿ ಹಣ ವಾಪಸ್ ಪಡೆಯದವರಿಗೆ ಮುಂದಿನ ಭಾರಿ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರಿಂದ ನಾವು ಠೇವಣಿ ಹಣ ವಾಪಸ್ ಪಡೆದಿರಲಿಲ್ಲ. ಈಗ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನಿವೇಶನಗಳ ಹಂಚಿಕೆ ಸರಿಯಾಗಿಲ್ಲ. 2009ರಲ್ಲಿ ನಿಗದಿಪಡಿಸಿದ್ದ ದರಕ್ಕಿಂತ ಎರಡೂವರೆ ಪಟ್ಟು ಅಧಿಕ ದರವನ್ನು ಅಧಿಕಾರಿಗಳು ಹೆಚ್ಚಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ತಾಲೂಕು ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಮಾತನಾಡಿ, ಅಧಿಕಾರಿಗಳು 2009ರಲ್ಲಿ ನಿವೇಶನ ಜಾಗಕ್ಕೆ ನಿಗದಿಪಡಿಸಿದ್ದ ಪ್ರತಿ ಚದರ ಅಡಿಗೆ 500 ರೂ. ನಿಗದಿಪಡಿಸಿದ್ದರು. ಈಗ ಮನಬಂದಂತೆ ಹೆಚ್ಚಿಸಿ 1300 ರೂ.ಗೆ ನಿಗದಿಪಡಿಸಿದ್ದಾರೆ. ಹೆಚ್ಚುವರಿ ಹಣವನ್ನು 4 ಕಂತುಗಳಲ್ಲಿ ನಿವೇಶನ ಖರೀದಿದಾರರು ಪಾವತಿಸಬೇಕು. ತಪ್ಪಿದಲ್ಲಿ ಹಿಂದೆ ಪಾವತಿಸಿದ್ದ ಹಣ ವಾಪಸ್ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಗೃಹಮಂಡಳಿಯಿಂದ ಖರೀದಿದಾರರಿಗೆ ನಿವೇಶನ ನೀಡಲು ನಿರ್ಮಿಸಿರುವ ಬಡಾವಣೆ ಪರಿಸರದ ಸ್ಥಳ ಉಪಯೋಗಕ್ಕೆ ಸಮರ್ಪಕವಾಗಿಲ್ಲ. ಬಡಾವಣೆಯಲ್ಲಿ ನಿರ್ಮಿಸಿರುವ ರಸ್ತೆಗಳ ಗುಣಮಟ್ಟ ಹದಗೆಟ್ಟಿದೆ. ಉತ್ತಮ ರಸ್ತೆ ಇತರ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಿ, ನಿವೇಶನಕ್ಕೆ ಸರ್ಕಾರ ನಿಗದಿಪಡಿಸಿದ ಮೌಲ್ಯ ಆಧರಿಸಿ ಸೂಕ್ತ ರೀತಿಯಲ್ಲಿ ಬೆಲೆ ನಿಗದಿ ಪಡಿಸಿ, ಗೃಹಮಂಡಳಿಯ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಅಧಿಕಾರಿಗಳು ತಪ್ಪಿದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಕಾವುಲ್ಲಾ, ಕಾರ್ಯದರ್ಶಿ ಶ್ರೀಕಾಂತ್‌ರಾಜ್, ಸಹ ಕಾರ್ಯದರ್ಶಿ ಮಂಜುನಾಥ್, ಕುಮಾರ್, ಸಿ.ಪಿ.ರವಿ, ಕಾಂತ್‌ರಾಜ್, ಗಂಗಾಧರ್ ಶೆಟ್ಟಿ, ಪ್ರಶಾಂತ್, ಮಾಧವ, ಲೋಹಿತ್, ಗೋಪಿ, ವಿಶ್ವನಾಥ್, ಪ್ರವೀಣ್, ವನಜಾಕ್ಷಿ ಇದ್ದರು.