ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿ ಬಂಧನ

ಕಡೂರು ತಾಲೂಕಿನ ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ರಫೀಕ್ ನೇತೃತ್ವದ ಪೊಲೀಸರ ತಂಡವನ್ನು ಡಾ. ಭೀಮರಾವ್  ಕ್ರಾಂತಿಕಾರಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಕುಂಕಾನಾಡು ಮಂಜುನಾಥ್ ಅಭಿನಂದಿಸಿದರು. ಯುವಕನ ತಾಯಿ ರೂಪಾ, ಅಕ್ಕ ಶುಭಾ, ಸಂಬಂಧಿ ಭಾಗ್ಯಾ, ಪಿಎಸ್‌ಐ ಪವನ್‌ಕುಮಾರ್ ಇದ್ದರು.
ಕಡೂರು ತಾಲೂಕಿನ ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ರಫೀಕ್ ನೇತೃತ್ವದ ಪೊಲೀಸರ ತಂಡವನ್ನು ಡಾ. ಭೀಮರಾವ್ ಕ್ರಾಂತಿಕಾರಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಕುಂಕಾನಾಡು ಮಂಜುನಾಥ್ ಅಭಿನಂದಿಸಿದರು. ಯುವಕನ ತಾಯಿ ರೂಪಾ, ಅಕ್ಕ ಶುಭಾ, ಸಂಬಂಧಿ ಭಾಗ್ಯಾ, ಪಿಎಸ್‌ಐ ಪವನ್‌ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೂ. 28 ಸಾವಿರಕ್ಕಾಗಿ
  • ಹಿರೇಗೌಜದಲ್ಲಿ ಇರಿದಿದ್ದ ಪ್ರಕರಣ
ಕಡೂರು: ಇಪ್ಪತ್ತೆಂಟು ಸಾವಿರ ರೂಪಾಯಿ ಸಾಲದ ವಿಚಾರವಾಗಿ ಸ್ನೇಹಿತನನ್ನೇ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಿದ್ದ ಪ್ರಕರಣಕ್ಕೆ ಸಿಕ್ಕ ಸಾಕ್ಷಿಗಳನ್ನು ಪರಿಶೀಲಿಸಿದ ಸಖರಾಯಪಟ್ಟಣ ಪೊಲೀಸರು ಸತ್ಯ ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ.
ಹಾಸನ ವಿಜಯನಗರ ಬಡಾವಣೆ ಯಶವಂತ್(22) ಕೊಲೆಯಾದ ದುರ್ದೈವಿ. ಈತನ ಸ್ನೇಹಿತ ಹಾಸನದ ಸಚಿನ್ ಬಂಧಿತ ಆರೋಪಿ. 
ಜೂ.13ರ ರಾತ್ರಿ ಹಿರೇಗೌಜ ಪೆಟ್ರೋಲ್ ಬಂಕ್ ಬಳಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಹಾಸನದ ಯಶವಂತ್(22) ಬಿದ್ದಿದ್ದ. ದಾರಿಯಲ್ಲಿ ಬಂದ ಆಂಬುಲೆನ್ಸ್ ಚಾಲಕ ಗಾಯಾಳುವನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸಿರಲಿಲ್ಲ. ಅಪಘಾತಕ್ಕೆ ಕಾರಣವಾದ ಸರಕು ಸಾಗಣೆ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಮೃತ ಯುವಕನ ಕುಟುಂಬ ಮತ್ತು ಪೊಲೀಸರು ಸಹ ಮೇಲ್ನೋಟಕ್ಕೆ ಇದು ಅಪಘಾತದ ಪ್ರಕರಣ ಎಂದು ಭಾವಿಸಿದ್ದರು. 
ಆಸ್ಪತ್ರೆಯಲ್ಲಿ ಯಶವಂತ್ ಗಾಯಗಳಿಗೆ ಚಿಕಿತ್ಸೆ ನೀಡಿ ಬ್ಯಾಂಡೇಜ್ ಮಾಡಿದ್ದರಿಂದ ಮರಣೋತ್ತರ ಪರೀಕ್ಷೆ ವೇಳೆಯೂ ಸತ್ಯ ಹೊರಬಂದಿರಲಿಲ್ಲ. ಮೃತನ ಪಾಲಕರೂ ಅಪಘಾತ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆ ವೇಳೆ ಅವರ ಮನವೊಲಿಸಿ ತನಿಖೆ ನಡೆಸಿದಾಗ ಸತ್ಯ ಹೊರಬಂದಿದೆ.
ರಸ್ತೆಯಲ್ಲಿ ಬಿದ್ದಿದ್ದ ಯುವಕನ ಮೇಲೆ ವಾಹನ ಹತ್ತುವುದನ್ನು ತಪ್ಪಿಸಲು ಹೋದಾಗ ನನ್ನ ವಾಹನ ಅಪಘಾತಕ್ಕೀಡಾಯಿತು ಎಂದು ಆಂಬುಲೆನ್ಸ್ ಚಾಲಕ ನೀಡಿದ ಹೇಳಿಕೆ ಆಧರಿಸಿ ಜಿಲ್ಲಾ ಎಸ್ಪಿ ಜಿತೇಂದ್ರ ಸಿಂಗ್ ದಯಾಮ ಅವರ ಮಾರ್ಗದರ್ಶನದಲ್ಲಿ ಕಡೂರು ಸಿಪಿಐ ರಫೀಕ್ ಹಾಗೂ ಸಖರಾಯಪಟ್ಟಣ ಪಿಎಸ್‌ಐ ಪವನ್‌ಕುಮಾರ್ ತನಿಖೆ ಆರಂಭಿಸಿದರು.
ಅಪಘಾತ ಸಂಭವಿಸಿದ ದಿನ ತಾಯಿಗೆ ಕರೆ ಮಾಡಿದ್ದ ಯಶವಂತ್, ನಾನು ಪುನೀತ್ ಎಂಬುವರಿಂದ ಕಾರು ಕಂತಿನ ಹಣ ಪಡೆಯಲು ಅಜ್ಜಂಪುರಕ್ಕೆ ತೆರಳುತ್ತಿರುವುದಾಗಿ ಹೇಳಿದ್ದ. ಅಜ್ಜಂಪುರದ ಪುನೀತ್ ಬಳಿ ವಿಚಾರಿಸಿದಾಗ ಕಂತಿನ ಹಣದ ಚೆಕ್ ನೀಡಿರುವುದಾಗಿ ತಿಳಿಸಿದ್ದು, ಜತೆಗೆ ಸಚಿನ್ ಎಂಬ ಸ್ನೇಹಿತ ಇದ್ದ ಎಂದು ಮಾಹಿತಿ ನೀಡಿದ್ದರು. ಪ್ರಕರಣಕ್ಕೆ ಪೂರಕವಾಗಿ ಡಾ. ಭೀಮರಾವ್ ಕ್ರಾಂತಿಕಾರಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಕುಂಕಾನಾಡು ಮಂಜುನಾಥ್ ನೀಡಿದ ಪೂರಕ ಮಾಹಿತಿಗಳನ್ನು ಆಧರಿಸಿದ ಪೊಲೀಸರು ಸಖರಾಯಪಟ್ಟಣ, ಚಿಕ್ಕಮಗಳೂರು, ಅಜ್ಜಂಪುರದ ವಿವಿಧೆಡೆಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದಾಗ ಯಶವಂತ್ ಮತ್ತು ಸಚಿನ್ ಚಿಕ್ಕಮಗಳೂರಿನ ಮದ್ಯದ ಅಂಗಡಿಗಳಿಗೆ ತೆರಳಿ ಮದ್ಯ ಸೇವನೆ ಮಾಡಿರುವುದು ಪತ್ತೆಯಾಯಿತು. ಬಳಿಕ ಬೈಕ್‌ನಲ್ಲಿ ಸಖರಾಯಪಟ್ಟಣ ಕಡೆ ರಾತ್ರಿ ಇಬ್ಬರೂ ತೆರಳಿದ್ದು, ಕೆಲ ಗಂಟೆಗಳ ನಂತರ ಅದೇ ವಾಹನದಲ್ಲಿ ಸಚಿನ್ ಒಬ್ಬನೇ ವಾಪಸ್ ಬಂದಿರುವುದು ಕ್ಯಾಮರಾಗಳಲ್ಲಿ ದಾಖಲಾಗಿತ್ತು. ಇಬ್ಬರ ಚಲನವಲನವನ್ನು ಸಿಸಿಟಿವಿಯಲ್ಲಿ ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ಸಚಿನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ. ಸಚಿನ್‌ಗೆ ಯಶವಂತ್ 28 ಸಾವಿರ ರೂಪಾಯಿ ಕೊಡಬೇಕಿತ್ತು. ಈ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಮಾರ್ಗ ಮಧ್ಯ ಮೂತ್ರ ವಿಸರ್ಜನೆಗೆ ನಿಲ್ಲಿಸಿದಾಗ ಜಗಳ ನಡೆದು ಸ್ಕ್ರೂ ಡ್ರೈವರ್‌ನಿಂದ ತಿವಿದು ಕೊಲೆ ಮಾಡಿರುವುದಾಗಿ ಸಚಿನ್ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿಯನ್ನು ಮಂಗಳವಾರ c ಒಪ್ಪಿಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net