ಸರ್ವ ಸಮಾಜದ ಒಳಿತಿಗೆ ಶ್ರಮಿಸಿದ ದಾರ್ಶನಿಕ

ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಎನ್.ಎ.ಸಂಜೀವ, ಅರುಣ್‌ಕುಮಾರ್, ಶೇಖರ್, ಸುನೀತಾ, ಪ್ರದೀಪ್, ರಾಕೇಶ್ ಇತರರಿದ್ದರು.
ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಎನ್.ಎ.ಸಂಜೀವ, ಅರುಣ್‌ಕುಮಾರ್, ಶೇಖರ್, ಸುನೀತಾ, ಪ್ರದೀಪ್, ರಾಕೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಲ್ಲವ ಸಮಾಜ
  • ಪೂಜೆಗೆ ಅವಕಾಶ ಕಲ್ಪಿಸಿದ್ದರು
ಬಾಳೆಹೊನ್ನೂರು: ಸಮಾಜದಲ್ಲಿ ಅಸಮಾನತೆ ವಿಜೃಂಭಿಸುತ್ತಿದ್ದಾಗ ಸರ್ವ ಸಮಾಜವನ್ನೂ ಒಗ್ಗೂಡಿಸಿದ ಮಹಾನ್ ದಾರ್ಶನಿಕ ಹಾಗೂ ಶ್ರೇಷ್ಠ ಸಂತ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಬಿಲ್ಲವ ಸಮುದಾಯದ ಯುವ ಮುಖಂಡ ಬಿ.ವೆಂಕಟೇಶ್ ಹೇಳಿದರು.
ಬಿಲ್ಲವ ಸಮಾಜ ಸೇವಾ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಾರಾಯಣಗುರು ಯಾವುದೇ ಜಾತಿಗೆ ಸೀಮಿತರಾದ ಗುರುಗಳಲ್ಲ. ಅವರು ಸರ್ವ ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಜಾತಿ ವ್ಯವಸ್ಥೆ ವಿರೋಧಿಸಿ ಸಮಾನತೆಯನ್ನು ಪ್ರತಿಪಾದಿಸಿದ್ದರು. ಕೇರಳಂನಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿ ಕೆಳ ವರ್ಗದವರಿಗೂ ಪೂಜೆಗೆ ಅವಕಾಶ ಕಲ್ಪಿಸಿದ್ದರು ಎಂದರು.
ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿದ್ದರು. ಅವರು ಸರ್ವ ಕಾಲಕ್ಕೂ ಸಲ್ಲುವ ಗುರು. ಹಿಂದುಳಿದ ವರ್ಗಗಳು ಸಮಾಜದಲ್ಲಿ ಮುಂಚೂಣಿಯಲ್ಲಿರಲು ನಾರಾಯಣಗುರುಗಳ ಹೋರಾಟವೇ ಕಾರಣ. ರಾಜ್ಯ ಸರ್ಕಾರ ನಾರಾಯಣಗುರು ಅಭಿವೃದ್ಧಿ ನಿಗಮ ರಚನೆ ಮಾಡಿದ್ದು ಸ್ವಾಗತಾರ್ಹ. ಆದರೆ ನಿಗಮಕ್ಕೆ ವಾರ್ಷಿಕ ಕೇವಲ 1 ಕೋಟಿ ರೂ. ಅನುದಾನ ನೀಡಿರುವುದು ಬೇಸರದ ಸಂಗತಿ. ಇತರ ನಿಗಮಗಳಿಗೆ ನೀಡುವಂತೆ ನಾರಾಯಣಗುರು ನಿಗಮಕ್ಕೂ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಬಿಲ್ಲವ ಸಂಘದ ಗೌರವಾಧ್ಯಕ್ಷ ಎಂ.ಜೆ.ಮೋಹನ್ ಮಾತನಾಡಿ, ನಾರಾಯಣಗುರುಗಳ ಮಾರ್ಗದರ್ಶನದಿಂದ ಬಿಲ್ಲವ ಸಮಾಜ  ಸುಸಂಸ್ಕೃತ ಸಮಾಜವಾಗಿದೆ. ಗುರುಗಳ ಸಮಾಜ ಸುಧಾರಣೆಯ ಕೆಲಸವನ್ನು ಮಕ್ಕಳಿಗೆ ಕಲಿಸಬೇಕಿದೆ. ಅವರು ನೀಡಿರುವ ಮಾರ್ಗದರ್ಶನಗಳಿಂದ ಸದಾ ಮುನ್ನಡೆದರೆ ಸಾರ್ಥಕತೆ ದೊರೆಯಲಿದೆ ಎಂದರು.
ಮಾಜಿ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಮಾತನಾಡಿ, ನಾರಾಯಣಗುರುಗಳ ಸಂದೇಶ ಸಾರ್ವಕಾಲಿಕವಾಗಿದ್ದು, ಈ ಹಿಂದೆ ಬಲಾಢ್ಯ ಸಮಾಜದಲ್ಲಿ ಹಿಂದುಳಿದ ಸಮುದಾಯಗಳು ಬೆಳವಣಿಗೆ ಹೊಂದಲು ನಾರಾಯಣಗುರುಗಳು ಕಾರಣರಾಗಿದ್ದರು ಎಂದು ಹೇಳಿದರು.
ನಾರಾಯಣಗುರು ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಮಾತನಾಡಿ, ನಾರಾಯಣಗುರುಗಳ ತತ್ವ, ಸಿದ್ಧಾಂತಗಳು ಎಲ್ಲರಿಗೂ ಮಾದರಿಯಾಗಿದ್ದು, ಯುವಜನರಿಗೆ ಅವರು ಪ್ರೇರಣಾದಾಯಕ ಶಕ್ತಿಯಾಗಿದ್ದರು. ಗುರುಗಳ ಜಯಂತಿ ಹಿನ್ನೆಲೆಯಲ್ಲಿ ಯುವ ವೇದಿಕೆಯಿಂದ ವೃದ್ಧಾಶ್ರಮಕ್ಕೆ ಅಗತ್ಯ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಿಲ್ಲವ ಸಂಘದ ಅಧ್ಯಕ್ಷ ಎನ್.ಎ.ಸಂಜೀವ ಮಾತನಾಡಿ, ಬಿಲ್ಲವ ಸಮುದಾಯದ ಯುವಜನರು ನಾರಾಯಣಗುರುಗಳ ಆಶಯದಂತೆ ಸಕ್ರಿಯವಾಗಿ ಸಮಾಜಸೇವಾ ಕಾರ್ಯಗಳಲ್ಲಿ ಭಾಗವಹಿಸಬೇಕು. ಗುರುಗಳ ಆಶಯದಂತೆ ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕಿ ಸರಳ, ಸಾಮೂಹಿಕ ವಿವಾಹಗಳಿಗೆ ಆದ್ಯತೆ ನೀಡಬೇಕು. ನಮ್ಮ ಮಕ್ಕಳಿಗೆ ಗುರುಗಳ ಧ್ಯೇಯೋದ್ದೇಶದ ಸಂಸ್ಕಾರ ಕಲಿಸಬೇಕಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಯುವ ಸಮಾವೇಶ ನಡೆಸಲು ಯುವ ವೇದಿಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. 
ಬಿಲ್ಲವ ಸಂಘದ ಕಾರ್ಯದರ್ಶಿ ಅರುಣ್‌ಕುಮಾರ್, ಖಜಾಂಚಿ ಶೇಖರ್ ಇಟ್ಟಿಗೆ, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಸತೀಶ್, ಪ್ರಮುಖರಾದ ರಾಮ ಡಿ. ಸಾಲಿಯಾನ್, ಕೆ.ಜೆ.ಶ್ರೀನಿವಾಸ್, ಚಂದ್ರಣ್ಣ, ಕೆ.ಪ್ರಶಾಂತ್‌ಕುಮಾರ್, ಪ್ರಕಾಶ್ ಮುದುಗುಣಿ, ಶಕುಂತಳಾ, ರಾಕೇಶ್, ದಯಾಕರ್ ಸುವರ್ಣ, ಸಿ.ಪಿ.ರಮೇಶ್, ಶಾರದಾ, ಜಯಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net