ಕತೆಯಲ್ಲದ ಕಥೆ’ ಕಿರುಚಿತ್ರ ಲೋಕಾರ್ಪಣೆ

ಚಿಕ್ಕಮಗಳೂರು ಮಾರ್ಕೆಟ್ ರಸ್ತೆಯ ಲಯನ್ಸ್ ಸಂಸ್ಥೆಯ ಜಿ.ರಮೇಶ್ ಅವರ ನಿವಾಸದಲ್ಲಿ ಲಯನ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕದ ಮನೆಯವರು ಆಯೋಜಿಸಿದ್ದ ಅಶ್ವಿನಿ ಅನೀಶ್ ನಿರ್ದೇಶನದ ಜಯಶ್ರೀ ದೇಶಪಾಂಡೆ ಕಥೆಯಾಧಾರಿತ `ಕತೆಯಲ್ಲದ ಕಥೆ’ ಕಿರುಚಿತ್ರ ಲೋಕಾರ್ಪಣೆ ನಡೆಯಿತು.
ಚಿಕ್ಕಮಗಳೂರು ಮಾರ್ಕೆಟ್ ರಸ್ತೆಯ ಲಯನ್ಸ್ ಸಂಸ್ಥೆಯ ಜಿ.ರಮೇಶ್ ಅವರ ನಿವಾಸದಲ್ಲಿ ಲಯನ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕದ ಮನೆಯವರು ಆಯೋಜಿಸಿದ್ದ ಅಶ್ವಿನಿ ಅನೀಶ್ ನಿರ್ದೇಶನದ ಜಯಶ್ರೀ ದೇಶಪಾಂಡೆ ಕಥೆಯಾಧಾರಿತ `ಕತೆಯಲ್ಲದ ಕಥೆ’ ಕಿರುಚಿತ್ರ ಲೋಕಾರ್ಪಣೆ ನಡೆಯಿತು.
Published on
ಚಿಕ್ಕಮಗಳೂರು:
ನಮ್ಮೂರಿನ ಪ್ರತಿಭೆಗಳು ನಾಡಿನ ಪ್ರತಿಭೆಗಳಾಗಿ ಬೆಳೆಯುತ್ತಿರುವುದು ನಮಗೆ ಹೆಮ್ಮೆ ಎನಿಸಬೇಕು. ಕಿರಿಯರಿಗೆ ಊರ ಹಿರಿಯರು ಬೆಂಬಲಿಸಿದರೆ ಅವರಿಂದ ಮಹತ್ಸಾಧನೆಯಾಗುತ್ತದೆ ಎಂದು ಲಯನ್ಸ್ ಪ್ರಾಂತೀಯ ರಾಯಭಾರಿ ವೆಂಕಟೇಶ್ ತಿಳಿಸಿದರು.
ನಗರದ ಮಾರ್ಕೆಟ್ ರಸ್ತೆಯ ಲಯನ್ಸ್ ಸಂಸ್ಥೆಯ ಜಿ.ರಮೇಶ್ ಅವರ ನಿವಾಸದಲ್ಲಿ ಲಯನ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕದ ಮನೆಯವರು ಆಯೋಜಿಸಿದ್ದ ಅಶ್ವಿನಿ ಅನೀಶ್ ನಿರ್ದೇಶನದ ಜಯಶ್ರೀ ದೇಶಪಾಂಡೆ ಕಥೆಯಾಧಾರಿತ `ಕತೆಯಲ್ಲದ ಕಥೆ’ ಕಿರುಚಿತ್ರ ಲೋಕಾರ್ಪಣೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ನಗರದ ಯುವಪ್ರತಿಭೆ ವೈಷ್ಣವಿ ಎನ್.ರಾವ್ ಅವರ ಸಹ ನಿರ್ದೇಶನ, ಬಾಲ ಕಲಾವಿದ ಸಾತ್ವಿಕ್ ಶೆಟ್ಟಿಯ ಪ್ರಧಾನ ಪಾತ್ರ, ರಂಗಭೂಮಿ ಕಲಾವಿದೆ ಪ್ರತಿಭಾನಂದರ ಪ್ರಮುಖ ಪೋಷಕ ಪಾತ್ರ, ಚಿಕ್ಕದಾದರೂ ಚೆನ್ನಾಗಿ ಅಭಿನಯಿಸಿರುವ ಸಾನ್ವಿ ಶೆಟ್ಟಿ ಹಾಗೂ ಉಮಾ ನಾಗೇಂದ್ರ ಅವರ ಉತ್ತಮ ಅಭಿನಯವಿರುವ ಈ ಕಿರುಚಿತ್ರ ನಮ್ಮಲ್ಲಿ ಅನೇಕರಲ್ಲಿ ನಮ್ಮದೇ ಕತೆ ಎನ್ನುವಂತೆ ಇದೆ. ನಿಜಕ್ಕೂ ಅಬ್ಬರದ ಕತೆಗಳ ನಡುವೆ ಈ ಕತೆ, ಹಾಗೂ ಕಿರುಚಿತ್ರ. ನೋಡುತ್ತಾ ನಲವತ್ತೆಂಟು ನಿಮಿಷ ಕಳೆದುದೇ ತಿಳಿಯುವುದಿಲ್ಲ ಎಂದರು.
ಕಸಾಪ ನಗರ ಘಟಕದ ಅಧ್ಯಕ್ಷೆ ರೂಪಾ ನಾಯ್ಕ್ ಮಾತನಾಡಿ, ನಮ್ಮ ಊರಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಲಯನ್ಸ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕದ ಮನೆಯ ಕಾರ್ಯ ಸ್ತುತ್ಯಾರ್ಹ. ಒಂದೂರಿನ ಸಾಂಸ್ಕೃತಿಕ ಶಕ್ತಿಗಳು ಒಂದು ಕುಟುಂಬದಂತೆ ಸಂಘಟಿತರಾಗುವುದರಿಂದ ಊರಿನ ಸಂಸ್ಕೃತಿಯ ಶ್ರೀಮಂತಿಕೆ ಹೆಚ್ಚುತ್ತದೆ ಎಂದರು.
ಲಯನ್ಸ್ ಸಂಸ್ಥೆಯ ಖಜಾಂಚಿ ಅಣ್ಣಾವೇಲು ಮಾತನಾಡಿ, ಕತೆಯಲ್ಲದ ಕಥೆಯಲ್ಲಿ ಒಬ್ಬನ ಬೇಜವಾಬ್ದಾರಿಯಿಂದ ಎಷ್ಟೊಂದು ಜನರ ಜೀವನದಲ್ಲಿ ಎಷ್ಟೆಲ್ಲಾ ವ್ಯತ್ಯಯಗಳಾಗುತ್ತವೆ ಎಂಬುದನ್ನು ಮನಮುಟ್ಟುವಂತೆ ತೋರಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸಂಸ್ಥೆಯ ನಾರಾಯಣ ಸ್ವಾಮಿ ಮಾತನಾಡಿ, ಪ್ರತಿಭಾ ವಿಕಾಸಕ್ಕೆ ನಮ್ಮ ಸಂಸ್ಥೆ ಸದಾ ಸಿದ್ಧವಾಗಿದೆ. ಸಾಮಾಜಿಕ ಸೇವೆ, ಸಾಂಸ್ಕೃತಿಕ ಸೇವೆ ನಮ್ಮ ಸಂಸ್ಥೆಯ ಎರಡು ಕಣ್ಣುಗಳು ಎಂದರು.
ಇದೇ ವೇಳೆ ಸಾತ್ವಿಕ್ ಶೆಟ್ಟಿ, ಸಾನ್ವಿ ಶೆಟ್ಟಿ, ಉಮಾ ನಾಗೇಂದ್ರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ನೇತ್ರಾ ವೆಂಕಟೇಶ್, ಭಗವತಿ ಹರೀಶ್, ಅಮರ್, ಜಗದೀಶ್, ಸಾಹಿತಿ ರಮೇಶ್ ಬೊಂಗಾಳೆ, ನಿವೃತ್ತ ಅರಣ್ಯ ಅಧಿಕಾರಿ ಶ್ರೀನಾಯ್ಕ್, ಡಾ.ಮಂಜುಳ ನಾರಾಯಣ ಸ್ವಾಮಿ, ಮಂಜುಳ ಮಹೇಶ್, ಲಕ್ಷ್ಮೀ ಅಭಿಷೇಕ್, ಅಣ್ಣಾವೇಲು ಮೊದಲಾದವರು ಉಪಸ್ಥಿತರಿದ್ದರು. ಗಾಯಕ ಮಲ್ಲಿಗೆ ಸುಧೀರ್ ಪ್ರಾರ್ಥಿಸಿ, ಅನುಭವ ನುಡಿಯಾಡಿದರು. ಈ.ರಮೇಶ್ ಸ್ವಾಗತಿಸಿದರು. ನಾಗರಾಜರಾವ್ ಕಲ್ಕಟ್ಟೆ ನಿರೂಪಿಸಿದರು. ಕಲ್ಕಟ್ಟೆ ಪುಸ್ತಕದ ಮನೆ ವ್ಯವಸ್ಥಾಪಕಿ ರೇಖಾ ನಾಗರಾಜರಾವ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net