ಗುರುವಿನ ಮಾರ್ಗದರ್ಶನದಲ್ಲಿ ಸಂಸ್ಕಾರ ಪಡೆದರೆ ಭವಿಷ್ಯ ಉಜ್ವಲ (rambapuri)
: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಸಚಿವ ಡಾ. ವಿಜಯಾನಂದ ಕಾಶಪ್ಪನವರ್ ದಂಪತಿಯನ್ನು ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
Published on:
Copied
Follow Us
ಬಾಳೆಹೊನ್ನೂರು: ತಂದೆ, ತಾಯಿ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಯೋಗ್ಯ ಸಂಸ್ಕಾರ ಪಡೆದರೆ ಭವಿಷ್ಯ ಉಜ್ವಲಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಡಾ. ವಿಜಯಾನಂದ ಕಾಶಪ್ಪನವರ್ ಹೇಳಿದರು.
ರಂಭಾಪುರಿ ಪೀಠದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರಾವಣ ಮಾಸದ ಇಷ್ಟಲಿಂಗ ಮಹಾ ಪೂಜಾ ಧರ್ಮ ಸಮಾರಂಭದಲ್ಲಿ ಮಾತನಾಡಿದರು. ಎಸ್.ಆರ್.ಕಾಶಪ್ಪನವರ್ ಅವರಲ್ಲಿ ರಾಜಕೀಯ ಇಚ್ಛಾಶಕ್ತಿ ಇತ್ತು. ಧರ್ಮದಲ್ಲಿ ಇಟ್ಟ ನಂಬಿಕೆ ಬಹಳ ದೊಡ್ಡದಾಗಿತ್ತು. ಅದೇ ದಾರಿಯಲ್ಲಿ ನಾನು ನಡೆಯುತ್ತಿರುವುದು ಸಂತೃಪ್ತಿ ತಂದಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಯಾವಾಗಲೂ ನಮ್ಮ ಮನೆತನದ ಮೇಲಿದೆ ಎಂದರು.
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದದಿಂದ ನಾನಿಂದು ಮಂತ್ರಿಯಾಗಿ ಜನಸೇವೆ ಮಾಡುವ ಸೌಭಾಗ್ಯ ಒದಗಿ ಬಂದಿದೆ. ರಾಜ್ಯದ ಜನರ ಹಿತರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯ ಕೈಕೊಂಡು ಪ್ರಗತಿಪಥದತ್ತ ಹೆಜ್ಜೆ ಹಾಕಲಾಗುವುದು ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯಕ್ಕೆ ಇನ್ನುಳಿದ ಎಲ್ಲ ಸಮುದಾಯದ ಜನರನ್ನು ಸಮಾನತೆ, ಸಾಮರಸ್ಯದತ್ತ ಕರೆತರುವ ಜವಾಬ್ದಾರಿ ಇದೆ. ನನ್ನ ಸಚಿವ ಸ್ಥಾನದ ಅವಧಿಯಲ್ಲಿ ಶ್ರೀ ರಂಭಾಪುರಿ ಪೀಠದ ಅಭಿವೃದ್ಧಿ ಪರವಾದ ಕಾರ್ಯಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿ, ಮನುಷ್ಯ ಜೀವನ ಪವಿತ್ರವಾದುದು. ಒಳ್ಳೆಯವರ ನೆರಳಿನಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು. ಅರಿತು ಬಾಳುವುದರಲ್ಲಿ ಜೀವನದ ಉತ್ಕರ್ಷತೆ ಮತ್ತು ಶ್ರೇಯಸ್ಸಿದೆ. ಸುಖ, ಶಾಂತಿ ಬದುಕಿಗೆ ಧರ್ಮವೇ ಮೂಲವಾಗಿದೆ ಎಂದರು.
ಗುರಿಯಿಲ್ಲದ ಬದುಕು ನಿರರ್ಥಕ. ಉತ್ತಮ ಸಂಬಂಧ, ಆದರ್ಶ ಸ್ನೇಹ ಯಾವಾಗಲೂ ನಮ್ಮೊಂದಿಗೆ ಇದ್ದರೆ ಬಾಳೆಲ್ಲ ಸುಖಮಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮ ಸೂತ್ರದಲ್ಲಿ ನಿರೂಪಿಸಿದ್ದಾರೆ ಎಂದರು. ಸಚಿವ ಡಾ. ವಿಜಯಾನಂದ ಕಾಶಪ್ಪನವರ್ ಅವರಿಗೆ ಗುರುರಕ್ಷೆ ನೀಡಿ ಶುಭ ಹಾರೈಸಿದರು.
ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ್, ಸಚಿವರ ಪತ್ನಿ ವೀಣಾ ಕಾಶಪ್ಪನವರ್, ಕಾಂಗ್ರೆಸ್ ಯುವ ಮುಖಂಡ ಸೋಮು ಗಣಾಚಾರಿ, ಬೆಂಗಳೂರಿನ ಮಾಜಿ ಮಹಾಪೌರ ಪುಟ್ಟರಾಜು, ಪ್ರಮುಖರಾದ ಮನೋಹರ, ಎಚ್.ಎಂ.ಲೋಕೇಶ, ಎಂ.ಕೊಟ್ರೇಶಪ್ಪ, ವಿರೂಪಾಕ್ಷಪ್ಪ ಮಲ್ಲಜ್ಜರ ಅವರು ಗುರುರಕ್ಷೆ ಸ್ವೀಕರಿಸಿದರು.