ಶೃಂಗೇರಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ರೈತ ಭವನದಲ್ಲಿ ನಡೆದ ಚುನಾವಣೆಯಲ್ಲಿ ಶೇ.95ರಷ್ಟು ಮತದಾನವಾಯಿತು.
ಟಿಎಪಿಸಿಎಂಎಸ್ 14 ನಿರ್ದೇಶಕ ಸ್ಥಾನಗಳಲ್ಲಿ ಮೂರು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. 11ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 23 ಜನ ಸ್ಪರ್ಧೆಯಲ್ಲಿದ್ದಾರೆ. ಒಟ್ಟು 682 ಮತದಾರರಲ್ಲಿ 652 ಮತದಾರರು ಮತ ಚಲಾಯಿಸುವ ಮೂಲಕ ಉತ್ತಮ ಮತದಾನ ನಡೆದಿದೆ.
ತಾಲೂಕಿನ 9 ಗ್ರಾಪಂ ವ್ಯಾಪ್ತಿಯಲ್ಲಿದ್ದ ಮತದಾರರನ್ನು ಭೇಟಿಯಾಗಿ ಮತ ಯಾಚಿಸುವುದೇ ಅಭ್ಯರ್ಥಿಗಳಿಗೆ ಸವಾಲು ಆಗಿತ್ತು. ಎರಡು ತಂಡಗಳಾಗಿ ಹಾಗೂ ಧರೇಕೊಪ್ಪ ಮಾಜಿ ಅಧ್ಯಕ್ಷ ಶ್ರೀ ಭಾನುಪ್ರಕಾಶ್ ಏಕಾಂಗಿಯಾಗಿ ಸ್ಪರ್ಧಿಸಿದ್ದಾರೆ. ಬೆಳಗ್ಗೆ 9ಕ್ಕೆ ಆರಂಭವಾದ ಮತದಾನ ಮಧ್ಯಾಹ್ನ 4 ಗಂಟೆವರೆಗೂ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿದ್ದ ಮತದಾರರನ್ನು ಕರೆತರುವ ಕಾಯಕ ಕೊನೆಯವರೆಗೂ ನಡೆಯಿತು. ದೂರದ ಬೆಂಗಳೂರು ಮತ್ತಿತರ ಕಡೆಯಿಂದ ಬಂದು ಕೆಲವರು ಮತ ಚಲಾಯಿಸಿದರು.
ತಹಸೀಲ್ದಾರ್ ಅನೂಪ್ ಸಂಜೋಗ್ ಚುನಾವಣೆ ಉಸ್ತುವಾರಿ ವಹಿಸಿದ್ದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎರಡು ವಿಭಾಗದಲ್ಲಿ ಮತದಾನ ನಡೆಯಿತು. ಮತದಾನ ಮಗಿದ ನಂತರ ರೈತ ಭವನದಲ್ಲಿ ಮತ ಎಣಿಕೆ ನಡೆಯಲಿದೆ.