ಎನ್.ಆರ್.ಪುರ ತಾಲೂಕಿನ 8 ಗ್ರಾಪಂಗಳಿಗೆ ತಲಾ 45 ಲಕ್ಷ ರೂ. ಅನುದಾನ

ಸೀತೂರು ಗ್ರಾಪಂ ನೂತನ ಕಟ್ಟಡವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು
ಸೀತೂರು ಗ್ರಾಪಂ ನೂತನ ಕಟ್ಟಡವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು
Published on
ಎನ್.ಆರ್.ಪುರ: ತಾಲೂಕಿನ 8 ಗ್ರಾಮ ಪಂಚಾಯಿತಿಗಳಿಗೆ ತಲಾ 45 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಸೀತೂರು ಗ್ರಾಪಂನ ನೂತನ ಕಟ್ಟಡ ಹಾಗೂ ಘನ ತ್ಯಾಜ್ಯ ವಿಲೇವಾರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸೀತೂರು ಗ್ರಾಪಂ ವ್ಯಾಪ್ತಿಯ ಕುದುರೆಗುಂಡಿ- ಹಳ್ಳಿಬೈಲು ರಸ್ತೆ ಅಭಿವೃದ್ಧಿಗೆ 4.50 ಕೋಟಿ ರೂ, ಶೇಡಗಾರು ಪಿಕಪ್‌ಗೆ 34 ಲಕ್ಷ, ಬೆಳ್ಳೂರು ಪಶು ಆಸ್ಪತ್ರೆಗೆ 34ಲಕ್ಷ, ಶಾಲೆ-ಅಂಗನವಾಡಿಗೆ 25ಲಕ್ಷ ಬಿಡುಗಡೆ ಮಾಡಲಾಗಿದೆ. ಈ ಭಾಗದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ. ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಕಾಡುಪ್ರಾಣಿ ಹಾಗೂ ಮನುಷ್ಯರ ನಡುವೆ ಸಂಘರ್ಷದಿಂದ ಶೃಂಗೇರಿ ಕ್ಷೇತ್ರದಲ್ಲಿ 9 ಜನ ಮೃತರಾಗಿದ್ದಾರೆ. ಪ್ರತಿ ಕುಟುಂಬಕ್ಕೂ 15 ರಿಂದ 20 ಲಕ್ಷ ರೂ. ಪರಿಹಾರ ನೀಡಲಾಗಿದೆ. ರಾಜ್ಯದಲ್ಲಿ ಕಾಡು ಪ್ರಾಣಿಗಳಿಂದ 60 ರಿಂದ 70 ಜನ ಬಲಿಯಾಗಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ 5 ಪುಂಡ ಆನೆ ಸೆರೆಯ ಹಿಡಿಯಲಾಗಿದೆ. ಇನ್ನೂ 4 ರಿಂದ 5 ಆನೆಯನ್ನು ಸೆರೆ ಹಿಡಿಯಲಾಗುವುದು ಎಂದರು.
ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನ ಜನರಿಗೆ ನೀರು ಪೂರೈಸಲು ಜಲ ಜೀವನ್ ಮಿಷನ್ ಯೋಜನೆಯಡಿ  60 ಕೋಟಿ ರೂ. ಮಂಜೂರಾಗಿದೆ. 3 ತಾಲೂಕುಗಳಲ್ಲಿ ಭದ್ರಾ, ತುಂಗಾ ನದಿಯಿಂದ ಶಾಶ್ವತ ಕುಡಿಯುವ ನೀರಿಗಾಗಿ 700 ಕೋಟಿ ರೂಪಾಯಿ ಮಂಜೂರಾಗಿದೆ. ಈ ಕಾಮಗಾರಿಗಳು ಮುಗಿದರೆ ಮುಂದೆ ಶೃಂಗೇರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.
 ಸೀತೂರು ಗ್ರಾಪಂ ಅಧ್ಯಕ್ಷೆ ಎಂ.ಎಸ್.ರೇಖಾ, ಉಪಾಧ್ಯಕ್ಷೆ ಪ್ರೇಮಾ, ಎಪಿಎಂಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಎಸ್.ಡಿ.ವಿ.ಗೋಪಾಲರಾವ್, ಬೆಮ್ಮನೆ ಮೋಹನ್, ಸಂದೀಪ್,ಎಸ್.ಉಪೇಂದ್ರ ರಾವ್, ಎಚ್.ಎಲ್.ವಿಜಯ, ಸಿದ್ದಪ್ಪಗೌಡ, ಸುಜಾತ, ದಾಮಿನಿ, ಪಿ.ಕವಿತ, ನವೀನ್ ಕುಮಾರ್, ಸಾಗರ , ಮನೀಶ್, ಶ್ರೀನಿವಾಸ್, ನವೀನ್ ಕುಮಾರ್ ಇದ್ದರು.

ಅಪಪ್ರಚಾರ ನಂಬಬೇಡಿ

ನನ್ನ ಕ್ಷೇತ್ರದ ಜನರಿಗೆ ಕೆಟ್ಟ ಹೆಸರು ತರುವ ಯಾವುದೇ ಕೆಲಸ ನಾನು ಮಾಡಿಲ್ಲ. ನನ್ನ ಮೇಲೆ ವಿರೋದ ಪಕ್ಷಗಳ ಮುಖಂಡರು ಅಪಪ್ರಚಾರ ಮಾಡಿದರು. ಇದನ್ನು ಯಾರೂ ನಂಬಬಾರದು. ಈಗಾಗಲೇ ಕೊಪ್ಪದಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ಸತ್ಯ ಶೋಧನೆ ಸಭೆ ಮಾಡಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಸೀತೂರು ಗ್ರಾಮಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ 22 ಕೋಟಿ ರೂ ಮಂಜೂರಾಗಿದೆ.ಆದರೆ, ಜಾಗದ ಸಮಸ್ಯೆಯಿಂದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಜಾಗ ಹುಡುಕಿಕೊಟ್ಟರೆ ತಕ್ಷಣ ಕಾಮಗಾರಿ ಮುಂದುವರಿಸಲಾಗುವುದು ಎಂದು  ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net