ಚಿಕ್ಕಮಗಳೂರು: 194 ಗ್ರಾಪಂಗಳ 1890 ಸ್ಥಾನಗಳಿಗೆ ಚುನಾವಣೆ

Chikkamagaluru
Published on

ಚಿಕ್ಕಮಗಳೂರು: ಗ್ರಾಪಂ ಚುನಾವಣೆಗೆ ಜಿಲ್ಲೆಯ 194 ಗ್ರಾಪಂಗಳ 1893 ಸ್ಥಾನಗಳಿಗೆ ಡಿ.22ರಂದು ನಡೆಯುವ ಚುನಾವಣೆಯಲ್ಲಿ 5290 ಅಭ್ಯರ್ಥಿಗಳು ಸ್ಪರ್ಧಾ ಕಣಕ್ಕಿಳಿದಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಚುನಾವಣೆಯಲ್ಲಿ 3,13,589 ಪುರುಷರು ಹಾಗೂ 3,16,065 ಮಹಿಳೆಯರು ಸೇರಿದಂತೆ ಜಿಲ್ಲೆಯ 6,29,165 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಜಿಲ್ಲಾಡಳಿತ ಅಗತ್ಯ ಪೊಲೀಸ್ ರಕ್ಷಣಾ ವ್ಯವಸ್ಥೆಯೊಂದಿಗೆ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ 1002 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾನ ಪ್ರಕ್ರಿಯೆ ಸಲುವಾಗಿ 5430 ಅಧಿಕಾರಿ-ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ. ಸೋಮವಾರ ಮಸ್ಟರಿಂಗ್ ಕಾರ್ಯದ ಬಳಿಕ ನಿಯೋಜಿತ ವಾಹನಗಳಲ್ಲಿ ಅಧಿಕಾರಿ ಸಿಬ್ಬಂದಿ ತೆರಳಿದ್ದು ಆಯಾ ಮತಗಟ್ಟೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಚುನಾವಣೆ ನಿಗದಿಯಾಗಿದ್ದ 209 ಗ್ರಾಪಂಗಳಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಚುನಾವಣೆ ಬಹಿಷ್ಕರಿಸಿರುವ 15 ಗ್ರಾಪಂಗಳ 126 ಸ್ಥಾನಗಳು ಮತ್ತು ಇತರ ಕಾರಣಕ್ಕೆ ನಾಮಪತ್ರ ಸಲ್ಲಿಕೆಯಾಗದ 13 ಸ್ಥಾನಗಳು ಮತ್ತು ಅವಿರೋಧವಾಗಿ ಆಯ್ಕೆಯಾದ 107 ಸ್ಥಾನಗಳ ಹೊರತಾಗಿ ಮಿಕ್ಕ ಸ್ಥಾನಗಳಿಗೆ ಮಾತ್ರ ಈಗ ಚುನಾವಣೆ ನಡೆಯುತ್ತಿದೆ. ಚುನಾವಣೆ ಬಹಿಷ್ಕಾರಗೊಂಡ ಕಾರಣಕ್ಕೆ ಹಾಗೂ ಅವಿರೋಧ ಆಯ್ಕೆಯ ಹಿನ್ನೆಲೆಯಲ್ಲಿ 72 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿಲ್ಲ.

166 ಸೂಕ್ಷ್ಮ, 72 ಅತಿಸೂಕ್ಷ್ಮ ಮತಗಟ್ಟೆ:
ಜಿಲ್ಲೆಯ 1002 ಮತಗಟ್ಟೆಗಳಲ್ಲಿ 166 ಸೂಕ್ಷ್ಮ 72 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇವು ಮಾತ್ರವಲ್ಲದೆ 34 ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಲ್ಲಿ ಸುಗಮ ಮತದಾನ ಪ್ರಕ್ರಿಯೆ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಮತಗಟ್ಟೆಗೆ ಪಿಆರ್‍ಒ, ಎಪಿಆರ್‍ಒ ಹಾಗೂ ಇಬ್ಬರು ಮತಗಟ್ಟೆ ಅಧಿಕಾರಿಗಳು ಇರಲಿದ್ದಾರೆ. ಇವಿಎಂ ಯಂತ್ರಗಳಿಲ್ಲದೆ ಮತಪತ್ರಗಳ ಮೂಲಕವೇ ಈ ಚುನಾವಣೆ ನಡೆಯಲಿದೆ. ಎಲ್ಲ ಮತಗಟ್ಟೆಗಳಿಗೆ ಮತಪೆಟ್ಟಿಗೆಗಳನ್ನು ಕಳುಹಿಸಿಕೊಡಲಾಗಿದ್ದು, ಹೆಚ್ಚುವರಿಯಾಗಿ ಶೇ.25 ರಷ್ಟು ಮತಪೆಟ್ಟಿಗೆಗಳನ್ನು ಕಾಯ್ದಿರಿಸಲಾಗಿದೆ.

ಮತಗಟ್ಟೆಗಳಲ್ಲಿ ಕರೊನಾ ಮುನ್ನೆಚ್ಚರಿಕೆ:
ಎಲ್ಲ ಮತಗಟ್ಟೆಗಳಲ್ಲೂ ಕರೊನಾ ಸೋಂಕು ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗೃತಾ ಕ್ರಮ ಅನುಸರಿಸಲಾಗಿದ್ದು, ಪ್ರತಿ ಬೂತ್‍ಗೆ ನಾಲ್ವರು ಸಿಬ್ಬಂದಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗವೇ ಪೂರೈಸಿರುವ ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಹಾಗೂ ಅಗತ್ಯ ಮಾಸ್ಕ್‍ಗಳು ಒಳಗೊಂಡಂತೆ ಒಂದೊಂದು ಕಿಟ್ ವಿತರಿಸಲಾಗಿದೆ. ಚುನಾವಣಾ ಕಾರ್ಯಕ್ಕೆ 423 ವಾಹನಗಳನ್ನು ಬಳಸಿಕೊಂಡಿದ್ದು, ಅವುಗಳಲ್ಲಿ 137 ಕೆಎಸ್‍ಆರ್‍ಟಿಸಿ ಬಸ್‍ಗಳು, 15 ಖಾಸಗಿ ಬಸ್‍ಗಳು, 42 ಮಿನಿ ಬಸ್‍ಗಳು ಹಾಗೂ 229 ಜೀಪ್‍ಗಳು ಸೇರಿವೆ.

ಸೋಂಕಿತರು ಮತ ಚಲಾಯಿಸಲು ಅವಕಾಶ:
ಕರೊನಾ ಸೋಂಕು ದೃಢಪಟ್ಟವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮತದಾನದ ಅವಧಿಯ ಕೊನೆಯ ಒಂದು ಗಂಟೆಯಲ್ಲಿ ಸೋಂಕಿತ ಮತದಾರಗೆ ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಹಾಲಿ 122 ಮಂದಿ ಕರೊನಾ ಸೋಂಕಿತರಿದ್ದು, ಇವರಲ್ಲಿ ಹೆಚ್ಚಿನವರು ಹೋಂ ಐಸೋಲೇಶನ್‍ನಲ್ಲಿದ್ದಾರೆ. ಉಳಿದಂತೆ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರಿಗೂ ಮತದಾನಕ್ಕೆ ಅವಕಾಶವಿದೆ. ಸೋಂಕಿತರ ಪಟ್ಟಿಯನ್ನು ಈಗಾಗಲೇ ಆಯಾ ತಾಲೂಕು ಆರೋಗ್ಯ ಇಲಾಖೆಗೆ ಕಳುಹಿಸಿಕೊಟ್ಟಿದ್ದು, ಸ್ಥಳೀಯ ಆರೋಗ್ಯ ಸಿಬ್ಬಂದಿ ಮತ ಚಲಾಯಿಸಲು ಸೋಂಕಿತರಿಗೆ ನೆರವಾಗಲಿದ್ದಾರೆ.

ಭದ್ರತೆಗೆ 1850ಕ್ಕೂ ಹೆಚ್ಚು ಪೊಲೀಸರು:
ಚುನಾವಣೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಕಾರ್ಯಕ್ಕೆ 1850ಕ್ಕೂ ಹೆಚ್ಚು ಸಿಬ್ಭಂದಿಯನ್ನು ನಿಯೋಜಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಐವರು ಡಿವೈಎಸ್‍ಪಿಗಳು ಚುನಾವಣೆ ವೇಳೆ ರಕ್ಷಣಾ ವ್ಯವಸ್ಥೆಯ ಉಸ್ತುವಾರಿ ನಿರ್ವಹಿಸಲಿದ್ದಾರೆ.

ಜಿಲ್ಲಾದ್ಯಂತ ನಗರ ಪಟ್ಟಣ ಪ್ರದೇಶಗಳ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸ್ ತರಬೇತಿ ಶಾಲೆಗಳ ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಒಟ್ಟಾರೆಯಾಗಿ 23 ಮಂದಿ ವೃತ್ತ ನಿರೀಕ್ಷಕರು, 27 ಮಂದಿ ಠಾಣಾಧಿಕಾರಿಗಳು, 125 ಮಂದಿ ಎಎಸ್‍ಐಗಳು, 271 ಮುಖ್ಯಪೇದೆಗಳು, 1083 ಪುರುಷ ಮತ್ತು ಮಹಿಳಾ ಕಾನ್ಸ್‍ಸ್ಟೇಬಲ್‍ಗಳು ಹಾಗೂ 350 ಹೋಂ ಗಾರ್ಡ್ ಗಳು ರಕ್ಷಣಾ ಕಾರ್ಯ ನಿರ್ವಹಿಸಲಿದ್ದಾರೆ.
ಎಂಟು ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಜತೆಗೆ ಪ್ರತಿ ತಾಲೂಕಿಗೆ 3 ಡಿಎಆರ್ ತುಕಡಿಗಳು ಸೇರಿ ಒಟ್ಟು 78 ವಿಚಕ್ಷಣಾ ದಳಗಳು ಚುನಾವಣೆ ವೇಳೆ ಕಾರ್ಯ ನಿರ್ವಹಿಸಲಿವೆ. ಪ್ರತಿ ದಳದಲ್ಲಿ ಓರ್ವ ಪಿಎಸ್‍ಐ ಮತ್ತು ಓರ್ವ ಎಎಸ್‍ಐ ಇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net