23.59 ಕೋಟಿ ರೂ. ಲಾಭದಲ್ಲಿ ಚಿಕ್ಕಮಗಳೂರು ಪಿಎಲ್‍ಡಿ ಬ್ಯಾಂಕ್

PLD Bank
Published on

ಚಿಕ್ಕಮಗಳೂರು: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನಿಂದ ಈ ಬಾರಿ ರೈತರಿಗೆ 13 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಈ.ಆರ್.ಮಹೇಶ್ ತಿಳಿಸಿದರು.

ನಗರದ ಜಾನಕಿಸಭಾ ಭವನದಲ್ಲಿ ಸೋಮವಾರ ಬ್ಯಾಂಕ್‍ನ 81ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಆರ್ಥಿಕ ಅಭ್ಯುದಯ ಧ್ಯೇಯವಾಗಿಸಿಕೊಂಡು ಪ್ರಗತಿ ಸಾಧಿಸುವ ಮೂಲಕ ನಿರಂತರವಾಗಿ ಸೇವೆ ನೀಡುತಿದ್ದು, ಪ್ರಸ್ತುತ ಸಾಲಿನಲ್ಲಿ ಕರೊನಾ ನಡುವೆಯೂ 23.59 ಲಕ್ಷ ರೂ.ನಿವ್ವಳ ಲಾಭ ಗಳಿಸಲಾಗಿದೆ ಎಂದರು.

ರಾಜ್ಯ ಬ್ಯಾಂಕ್‍ನಲ್ಲಿ 235 ಲಕ್ಷ ರೂ. ಠೇವಣಿ
ಬ್ಯಾಂಕಿನಲ್ಲಿ ಮಾರ್ಚ್ ಅಂತ್ಯಕ್ಕೆ ಎ, ಬಿ ಹಾಗೂ ಡಿ.ತರಗತಿಯ ಸದಸ್ಯರಿಂದ ಒಟ್ಟು 127.22 ಲಕ್ಷ ಪಾಲು ಬಂಡವಾಳವಿದ್ದು 187 ಜನರು ಹೊಸದಾಗಿ ಸದಸ್ಯತ್ವ ಪಡೆದಿದ್ದಾರೆ. ಬ್ಯಾಂಕಿನಲ್ಲಿ 139.20 ಲಕ್ಷ ಅಪದ್ಧನ ಮತ್ತು ಕಟ್ಟಡ ನಿಧಿಗೆ 21.13 ಲಕ್ಷ ಹಾಗೂ ವಿವಿಧ ನಿಧಿಯ 93.09 ಲಕ್ಷ ಇದ್ದು ಇವುಗಳಲ್ಲಿ 235.07 ಲಕ್ಷವನ್ನು ರಾಜ್ಯ ಬ್ಯಾಂಕಿನಲ್ಲಿ ಠೇವಣಿ ಇರಿಸಲಾಗಿದೆ ಎಂದು ತಿಳಿಸಿದರು.

928.98 ಲಕ್ಷ ರೂ.ಸಾಲ ಬಾಕಿ
2019-20ರಲ್ಲಿ 4 ಕೋಟಿ ಸಾಲ ವಿತರಿಸಲಾಗಿದ್ದು ಕರೊನಾ ಹಿನ್ನೆಲೆಯಲ್ಲಿ ಸಾಲ ವಸೂಲಾತಿ ಶೇಕಡವಾರು ಕಡಿಮೆಯಾದರೂ ರಾಜ್ಯ ಬ್ಯಾಂಕಿನ ತಗಾದೆ ಪೂರ್ಣಗೊಳಿಸಿದ್ದರಿಂದ ಸಾಲ ಪಡೆಯುವ ಅರ್ಹತೆ ಹೊಂದಿ ಸಾಲ ವಿತರಣೆಗೆ ಸಹಕಾರಿಯಾಗಿದೆ ಎಂದರು. ಕಳೆದ ಮಾರ್ಚ್ ಅಂತ್ಯಕ್ಕೆ 1475 ಸದಸ್ಯರಿಂದ 928.98 ಲಕ್ಷ ರೂ.ಸಾಲ ಬರಬೇಕಿದೆ ಎಂದರು.

ಬ್ಯಾಂಕಿನ ಹಿರಿಯ ಸದಸ್ಯ ವೀರೇಗೌಡ ಸಭೆ ಉದ್ಘಾಟಿಸಿದರು. ಉಪಾಧ್ಯಕ್ಷ ಎಚ್.ಬಿ. ಬಸವೇಶ್, ನಿರ್ದೆಶಕರಾದ ಎ.ಎನ್.ರವೀಶ್, ಎಂ.ಸಿ.ಪ್ರಕಾಶ್, ಎಸ್.ಇ.ರಮೇಶ್, ದಾನಿಹಳ್ಳಿ ಮಂಜುನಾಥ್, ಸಿ.ಎಸ್. ರಂಗನಾಥ್, ಕರಾಳಮ್ಮ, ಜಾನಕಮ್ಮ, ಎಂ.ಬಿ. ರುದ್ರೇಗೌಡ, ಮಲ್ಲೇಶಯ್ಯ, ಹೂವಪ್ಪಶೆಟ್ಟಿ, ಜಿಲ್ಲಾ ವ್ಯವಸ್ಥಾಪಕ ಬಿ.ಜೆ ಸುರೇಶ್, ವ್ಯವಸ್ಥಾಪಕ ಸೋಮಸುಂದರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net