

ಚಿಕ್ಕಮಗಳೂರು: ಅಪಘಾತದ ಬಗ್ಗೆ ನೀಡಿದ ಹೇಳಿಕೆಗೆ ಇಂದು ಚಂದ್ರಪ್ರಭ ಯೂಟರ್ನ್ ಹೊಡೆದಿದ್ದು, ಚಿಕ್ಕಮಗಳೂರಿನ ಸಂಚಾರಿ ಠಾಣೆ ಮುಂಭಾಗ ಕಣ್ಣೀರಿಟ್ಟಿದ್ದಾರೆ. ಸೋಮವಾರ ಅಪಘಾತ ಮಾಡಿ, ಎಸ್ಕೇಪ್ ಆಗಿದ್ದ ಚಂದ್ರಪ್ರಭ ಪೊಲೀಸರ ಸೂಚನೆ ಮೇರೆಗೆ ಇಂದು ಚಿಕ್ಕಮಗಳೂರು ಠಾಣೆಗೆ ಹಾಜರಾಗಿದ್ದರು.
'ನಾನು ಮಾಡಿದ ಕೆಲಸ ತಪ್ಪಾಯ್ತು, ಎಲ್ಲರಿಗೂ ಕ್ಷಮೆ ಕೇಳುತ್ತೇನೆ' ಎಂದು ಪೊಲೀಸ್ ಸ್ಟೇಷನ್ ಮುಂಭಾಗ ಚಂದ್ರಪ್ರಭ ಕ್ಷಮೆ ಕೇಳಿದ್ದಾರೆ. 'ಆತ ಕುಡಿದಿದ್ದ ಎಂದು ಹೇಳಿದ್ದೆ, ತಪ್ಪಾಯ್ತು...ಕ್ಷಮಿಸಿ, ಆತ ಕುಡಿದಿರಲಿಲ್ಲ. ಅಪಘಾತವಾದ ಯುವಕನ ಯೋಗಕ್ಷೇಮದ ಬಗ್ಗೆ ವಿಚಾರಿಸಬೇಕಿತ್ತು. ಆದರೆ, ವಿಚಾರಿಸಲಿಲ್ಲ, ತಪ್ಪಾಯ್ತು' ಎಂದು ಚಂದ್ರಪ್ರಭ ವಿನಂತಿ ಮಾಡಿಕೊಂಡಿದ್ದಾರೆ.
'ನಾನು ಬಡವ, ತಂದೆ ಸತ್ತು 11 ವರ್ಷವಾಯ್ತು, ನಾವಿಬ್ಬರೂ ದಲಿತರು. ಆಸ್ಪತ್ರೆಗೆ ಹೋಗಿ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲತೇಶ್ ಆಸ್ಪತ್ರೆ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ' ಎಂದು ಚಿಕ್ಕಮಗಳೂರು ಸಂಚಾರಿ ಠಾಣೆ ಮುಂಭಾಗ ಹಾಸ್ಯನಟ ಚಂದ್ರಪ್ರಭಾ ಹೇಳಿಕೆ ನೀಡಿದ್ದಾರೆ.
ನಿನ್ನೆಯಷ್ಟೇ ಚಂದ್ರಪ್ರಭ ಅವರು "ನಾನು ತುಂಬಾ ಒತ್ತಡದಲ್ಲಿದ್ದೇನೆ. ಅಪಘಾತದ ನಂತರ ನಾನು ಕಾರು ನಿಲ್ಲಿಸಿ, ಪೊಲೀಸ್ ಜತೆ ಮಾತನಾಡಿ ತೆರಳಿದೆ. ಪೊಲೀಸರೇ ನನ್ನನ್ನು ಕಳುಹಿಸಿಕೊಟ್ಟರು, ಅಗತ್ಯವಿದ್ದರೆ ಪುನಃ ಬರಲು ತಿಳಿಸಿದರು. ಈಗ ಹೊರಗಡೆ ಕೆಲಸದಲ್ಲಿದ್ದೇನೆ. ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗುವೆ. ನನ್ನ ವಾಹನದ ಮೂಲ ದಾಖಲೆಗಳು ಬೆಂಗಳೂರಲ್ಲಿದೆ. ಅದನ್ನು ತರಿಸಿಕೊಂಡು ನಾನು ಪೊಲೀಸ್ ಠಾಣೆಗೆ ಹಾಜರಾಗುವೆ'' ಎಂದು ತಿಳಿಸಿದ್ದರು.
''ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಾಲ್ತೇಶ್ ಮನೆಯವರು ನನ್ನನ್ನು ಸಂಪರ್ಕಿಸಿಲ್ಲ, ನನ್ನ ಸ್ನೇಹಿತನನ್ನ ಅವರು ಸಂಪರ್ಕಿಸಿದ್ದಾರೆ. ಮೊದಲು ನಾನು ಆಸ್ಪತ್ರೆಗೆ ಹೋಗಲ್ಲ, ನೇರವಾಗಿ ಠಾಣೆಗೆ ಭೇಟಿ ನೀಡಿ, ಪೊಲೀಸ್ ಏನು ಹೇಳುತ್ತಾರೋ ಅದನ್ನ ನಾನು ಕೇಳುವೆ'' ಎಂದು ಚಂದ್ರಪ್ರಭ ಗುರುವಾರ ಹೇಳಿಕೆ ನೀಡಿದ್ದರು.