

ಚಿಕ್ಕಮಗಳೂರು: ಸುದೀರ್ಘ ದಿನಗಳ ಕಾಲ ಹಸಿರು ವಲಯದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗಳವಾರ ಐವರಲ್ಲಿ ಸೋಂಕು ದೃಢಪಟ್ಟಿದೆ. ಮೂಡಿಗೆರೆ ತಾಲೂಕಿನ ಸರ್ಕಾರಿ ವೈದ್ಯಾಧಿಕಾರಿ, ತರೀಕೆರೆಯ ಗರ್ಭಿಣಿ, ಎನ್.ಆರ್. ಪುರ ತಾಲೂಕಿನ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಐವರು ಸೋಂಕಿತರ ಪೈಕಿ ಮೂಡಿಗೆರೆ ತಾಲೂಕಿನ ವೈದ್ಯಾಧಿಕಾರಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರಬಹುದು ಎನ್ನುವ ಶಂಕೆಯೇ ಭೀತಿಗೆ ಕಾರಣವಾಗಿದೆ. 795 ಜನ ಮೂಡಿಗೆರೆ ವೈದ್ಯರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಮಾಹಿತಿ ಇದ್ದು, ಕರೊನಾ ಸೇನಾನಿಗಳು ಈ 795 ಜನರನ್ನು ಕ್ವಾರಂಟೈನ್ ಮಾಡಲು ಅವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಸರ್ಕಾರದ ಮಾರ್ಗಸೂಚಿಯಂತೆ ಕರೊನಾ ಸೇನಾನಿಗಳು ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಮೂಡಿಗೆರೆ ತಾಲೂಕಿನ ವೈದ್ಯರೊಬ್ಬರ ಗಂಟಲು ದ್ರವ ಸಂಗ್ರಹ ಮಾಡಿ ಹಾಸನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ತರೀಕೆರೆಯ ಗರ್ಭಿಣಿ ಆರೋಗ್ಯ ತಪಾಸಣೆಗೆ ತರೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಾಗ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದರಿಂದ ತಪಾಸಣೆ ಮಾಡಲಾಗಿತ್ತು.
ಮೇ 14ರಂದು ಎನ್.ಆರ್. ಪುರ ತಾಲೂಕಿನ ಹಳ್ಳಿಯೊಂದರ ಒಂದೇ ಕುಟುಂಬದ 9 ಜನ ಮುಂಬೈನಿಂದ ಆಗಮಿಸಿದ್ದು, ಅವರನ್ನು ಕೊಪ್ಪ ಪಟ್ಟಣದ ಹೊರವಲಯದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ ಮೂವರ ಗಂಟಲು ದ್ರವ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವೆರಲ್ಲರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೂಡಿಗೆರೆ ತಾಲೂಕಿನ ವೈದ್ಯರ ಸೋಂಕಿನ ಮೂಲ ಗೊತ್ತಾಗಿಲ್ಲ. ತರೀಕೆರೆಯ ಗರ್ಭಿಣಿ ಮೂಡಿಗೆರೆ ತಾಲೂಕಿನ ವೈದ್ಯರ ಬಳಿ ಚಿಕಿತ್ಸೆ ಪಡೆದಿರುವ ಶಂಕೆ ಇದ್ದು, ದೃಢಪಡಬೇಕಿದೆ. ಎನ್.ಆರ್. ಪುರ ತಾಲೂಕಿನ ಮೂವರು ಮುಂಬೈನಿಂದ ಬಂದಿದ್ದು ಅವರಿಗೆ ಅಲ್ಲಿಂದಲೇ ಸೋಂಕು ಬಂದಿದೆ.
ಮುಂಬೈನಿಂದ ಬಂದಿರುವ ಎನ್.ಆರ್. ಪುರ ತಾಲೂಕಿನ 9 ಜನ ಪ್ರತ್ಯೇಕವಾಗಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ಕಾರಣ ಅವರು ಸಾರ್ವಜನಿಕರ ಸಂಪರ್ಕಕ್ಕೆ ಬಂದಿಲ್ಲ. ತರೀಕೆರೆಯ ಗರ್ಭಿಣಿ ಕ್ವಾರಂಟೈನ್ನಲ್ಲಿ ಇರಲಿಲ್ಲ. ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟ ನಂತರ ಕುಟುಂಬದ ಸದಸ್ಯರನ್ನು ಲಿಂಗದಹಳ್ಳಿ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.