

ಚಿಕ್ಕಮಗಳೂರು: ಜಿಲ್ಲಾದ್ಯಂತ ಮಂಗಳವಾರ ನಡೆದ ಗ್ರಾಪಂ ಚುನಾವಣೆಯಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಸಂಚಲನ ಕಂಡು ಬಂದಿದ್ದು, ಅಭ್ಯರ್ಥಿಗಳು ಸ್ಥಳೀಯರೇ ಆಗಿರುವ ಕಾರಣಕ್ಕೆ ಮತದಾರರು ಸಹ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.
ಕೆಲಸಕ್ಕೆ ತೆರಳುವ ತರಾತುರಿಯಲ್ಲಿದ್ದ ಬಹುತೇಕ ಕಾರ್ಮಿಕರು ಮುಂಜಾನೆಯೇ ಮತ ಚಲಾಯಿಸಿ ನಿರ್ಗಮಿಸಿದರು. ಅಂತೆಯೇ ಸಂಜೆ ಕೆಲಸ ಮುಗಿಸಿ ಮತದಾನಕ್ಕೆ ಆಗಮಿಸಿದ ಕಾರ್ಮಿಕರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ಹೊತ್ತಲ್ಲಿ ಸಾಕಷ್ಟು ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯಿತು.
ಮಧ್ಯಾಹ್ನದ ವೇಳೆಗೆ ಉತ್ತಮ ಮತದಾನ:
ಜತೆಗೆ ಈ ಬಾರಿ ಗ್ರಾಮಾಂತರ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ನೀರಿನ ಸಮಸ್ಯೆ ಮಾತ್ರವಲ್ಲದೆ ಇತರ ಅಸಮಾಧಾನಗಳಿಗೂ ಅವಕಾಶವಾಗದಿರುವುದರಿಂದ ಮಧ್ಯಾಹ್ನದ ವೇಳೆಗೆಲ್ಲ ಮತದಾನ ಪ್ರಮಾಣದಲ್ಲಿ ಉತ್ತಮ ಪ್ರಗತಿ ಕಂಡು ಬಂದಿತು. ಅಭ್ಯರ್ಥಿಗಳೆಲ್ಲ ಸ್ಥಳೀಯರೇ ಆಗಿ ಮತಗಟ್ಟೆಗಳ ಬಳಿ ಆಗಾಗ್ಗೆ ಕಾಣಿಸಿಕೊಂಡು ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಇದರಿಂದ ಮತದಾನದಲ್ಲಿ ಹೆಚ್ಚು ಉತ್ಸುಕತೆ ಕಂಡು ಬಂದರೆ ವಯೋವೃದ್ಧರು, ಅಂಗವಿಕಲರು ಹಾಗೂ ಅನಾರೋಗ್ಯ ಪೀಡಿತರು ಸಹ ತಮ್ಮ ಬಂಧುಗಳ ನೆರವಿನಲ್ಲಿ ಹಕ್ಕು ಚಲಾಯಿಸಲು ಆಸಕ್ತಿ ವಹಿಸಿದ್ದರು.
ರಾಜಕೀಯ ಪಕ್ಷಗಳ ಪ್ರಭಾವ:
ಬಹುತೇಕ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಬೆಂಬಲಿತರಾಗಿದ್ದರೂ ಚುನಾವಣೆ ಪಕ್ಷದ ಚಿಹ್ನೆಯ ಹಂಗಿಲ್ಲದೆ ನಡೆದಿದ್ದರೂ ಆಯಾ ಪಕ್ಷಗಳ ಪ್ರಭಾವವಂತೂ ಮತಗಟ್ಟೆಗಳ ಬಳಿ ಇದ್ದೇ ಇತ್ತು. ಆದರೆ ಜಿಲ್ಲೆ, ತಾಲೂಕು ಮತ್ತಿತರ ಕಡೆಗಳಿಂದ ಪ್ರಮುಖ ಮುಖಂಡರು ಮಾತ್ರ ಮತಗಟ್ಟೆಗಳತ್ತ ಸುಳಿದದ್ದು ಕಂಡು ಬರಲಿಲ್ಲ.
ಬೆಳಗ್ಗಿನಿಂದಲೇ ಮತದಾನ ಚುರುಕುಗತಿಯಲ್ಲಿ ನಡೆದಿದ್ದು, ನಗರ ಸಮೀಪದ ಗ್ರಾಪಂ ತೇಗೂರು, ಮಳಲೂರು, ಕೆ.ಆರ್.ಪೇಟೆ, ವಳಗೇರಹಳ್ಳಿ, ಕರ್ತಿಕೆರೆ, ಕಣಿವೆಹಳ್ಳಿ, ಲಕ್ಯಾ, ಹಳೆ ಲಕ್ಯಾ ಮುಂತಾದ ವ್ಯಾಪ್ತಿಯ ಮತಗಟ್ಟೆಗಳ ಬಳಿ ಬೆಳಗ್ಗಿನಿಂದಲೇ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಮತದಾರರ ಮನವೊಲಿಸುತ್ತಿದ್ದರು. ಬೆಳಗ್ಗೆ 11.30ರ ಸುಮಾರಿಗೆ ವಳಗೇರಹಳ್ಳಿ ಗ್ರಾಪಂನಲ್ಲಿ ಶೇ.30 ರಷ್ಟು ಮತದಾನವಾಗಿತ್ತು. ಆದರೂ ಮತದಾರರ ಸರದಿಯ ಸಾಲು ಉದ್ದಕ್ಕೆ ಬೆಳೆದು ನಿಂತಿತ್ತು.
ಎರಡು ಗ್ರಾಪಂಗಳಲ್ಲಿ ಸ್ನೇಹಿತರ ಸವಾಲ್:
ಈ ಚುನಾವಣೆಯಲ್ಲಿ ಆಪ್ತ ಸ್ನೇಹಿತರಿಬ್ಬರ ಸವಾಲಿಗೆ ತಾಲೂಕಿನ ಮಳಲೂರು ಹಾಗೂ ಕೆ.ಆರ್.ಪೇಟೆ ಗ್ರಾಪಂಗಳು ಸಾಕ್ಷಿಯಾಗಿವೆ.
ಅಭಿಜಿತ್ ಹಾಗೂ ಕೆ.ಆರ್.ದರ್ಶನ್ ಬಾಲ್ಯ ಸ್ನೇಹಿತರಾಗಿದ್ದು, ಇಬ್ಬರು ಸಹ ಬಿಜೆಪಿಯಲ್ಲೇ ಗುರುತಿಸಿಕೊಂಡವರು. ಸಂಜೆ ನಿತ್ಯ ಇಬ್ಬರೂ ಒಟ್ಟಿಗೆ ಸೇರುವಷ್ಟು ಆಪ್ತತೆ ಹೊಂದಿದವರು. ಚುನಾವಣೆಯಲ್ಲಿ ಪರಸ್ಪರ ಯಾರೂ ಬೇಕಾದರೂ ಕಣದಿಂದ ಹಿಂದೆ ಸರಿಯಲು ಸಿದ್ಧರಾಗಿದ್ದರು. ಆದರೆ ಅವರ ಬೆಂಬಲಿಗರು ಪಟ್ಟು ಹಿಡಿದಿದ್ದರಿಂದ ಇಬ್ಬರೂ ಕಣದಲ್ಲಿ ಉಳಿದು ಚುನಾವಣೆ ಎದುರಿಸಿದ್ದಾರೆ. ಚುನಾವಣೆಗಷ್ಟೆ ನಮ್ಮ ಸ್ಪರ್ಧೆ ಸೀಮಿತವಾಗಿದ್ದು, ನಮ್ಮಲ್ಲಿ ಯಾರು ಗೆದ್ದರೂ ಸಂತೋಷವೆ ಎಂದು ಇಬ್ಬರೂ ಹೇಳಿಕೊಳ್ಳುತ್ತಿದ್ದಾರೆ.
ಇಬ್ಬರಲ್ಲಿ ಯಾರು ಹಿತವರು?:
ದರ್ಶನ್ ಅವರಿಗೆ ಮಳಲೂರಲ್ಲಿ ಹೆಚ್ಚು ಒಲವು ವ್ಯಕ್ತವಾಗಿದ್ದರೆ, ಕಲ್ಲಳ್ಳಿ ಗ್ರಾಮದವರು ಅಭಿಜಿತ್ ಅವರ ಪರ ನಿಂತಿದ್ದಾರೆ. ಇಬ್ಬರಲ್ಲಿ ಯಾರು ಹಿತವರು ಎನ್ನುವ ಪರೀಕ್ಷೆ ನಡೆದಿದ್ದು, ಫಲಿತಾಂಶದಲ್ಲಿ ವಾಸ್ತವ ಹೊರಬರಲಿದೆ. ಗ್ರಾಮದಲ್ಲಿ ಇವರಿಬ್ಬರ ಸಮಬಲದ ಸ್ಪರ್ಧೆ. ಜತೆಗೆ ಇಲ್ಲಿನ ಮತಗಟ್ಟೆಯೂ ಸೂಕ್ಷ್ಮ. ಹೀಗಾಗಿ ಸಶಸ ಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಇದೇ ಪರಿಸ್ಥಿತಿ ಕೆ.ಆರ್.ಪೇಟೆ ಗ್ರಾಪಂನಲ್ಲಿ ಸಹ ಕಂಡು ಬಂದಿದೆ. ಬಾಲ್ಯ ಸ್ನೇಹಿತರಾಗಿರುವ ಮಾಜಿ ಸೈನಿಕ ರಾಘವೇಂದ್ರ ಹಾಗೂ ಗ್ರಾಪಂ ಮಾಜಿ ಸದಸ್ಯ ಎಂ.ಈಶ್ವರ್ ತೊಡೆತಟ್ಟಿ ನಿಂತಿದ್ದು, ಇವರಲ್ಲಿ ಜನ ಯಾರನ್ನು ಆಶೀರ್ವದಿಸಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಅಸಹಾಯಕರಿಂದ ಮತದಾನ:
ಸಾಕಷ್ಟು ಇಳಿವಯಸ್ಸಿಗರು, ಅಂಗವಿಕಲರು ಹಾಗೂ ಅನಾರೋಗ್ಯ ಪೀಡಿತರು ಮಂಗಳವಾರ ತಮ್ಮ ಪುತ್ರರು, ಮೊಮ್ಮಕ್ಕಳ ನೆರವಿನಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸಿದರು. ಕೆಲವರು ವ್ಹೀಲ್‍ಚೇರ್ ಅವಲಂಬಿಸಿದರು.
ತೇಗೂರಿನ 92 ವರ್ಷದ ಮಾಳಮ್ಮ ಎಂಬ ವೃದ್ಧೆ ತನ್ನ ಮೊಮ್ಮಗನ ಜತೆ ಆಗಮಿಸಿ ಮತದಾನ ಮಾಡಿದರು. ಕೆ.ಆರ್.ಪೇಟೆಯ ಗ್ರಾಪಂನ ಮತಗಟ್ಟೆಯಲ್ಲಿ ಬಿಗ್ಗನಹಳ್ಳಿ ಗ್ರಾಮದ ಶತಾಯುಷಿ ವಜ್ರಮ್ಮ ಎಂಬುವವರು ಗಾಲಿಕುರ್ಚಿಯಲ್ಲಿ ಬಂದು ಮಗ ಮತ್ತು ಮೊಮ್ಮಕ್ಕಳ ಸಹಕಾರದಲ್ಲಿ ಮತ ಚಲಾಯಿಸಿದರು.ಕರ್ತಿಕೆರೆ ಗ್ರಾಪಂನಲ್ಲಿ 85 ವರ್ಷದ ವೃದ್ಧೆ ಯಲ್ಲಮ್ಮ ಎಂಬುವವರು ಮೊಮ್ಮಗ ದೇವೇಂದ್ರ ರಾಜ್ ಅರಸ್ ನೆರವಿನಲ್ಲಿ ಮತ ಚಲಾಯಿಸಿದರೆ, ಪಾರ್ಶ್ವವಾಯು ಪೀಡಿತರಾಗಿದ್ದ ದೇವರಹಳ್ಳಿಯ ಲಕ್ಕೇಗೌಡ ತಮ್ಮ ಚಂದ್ರೇಗೌಡರ ನೆರವಿನಲ್ಲಿ ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿದರು.