ಚಿಕ್ಕಮಗಳೂರು: 6536 ನಾಮಪತ್ರಗಳು ಕ್ರಮಬದ್ಧ

download
Published on

ಚಿಕ್ಕಮಗಳೂರು: ಜಿಲ್ಲೆಯ ಎಂಟು ತಾಲೂಕುಗಳ ಗ್ರಾಪಂ ಚುನಾವಣೆಗೆ 6536 ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿದ್ದು, ನಾಮಪತ್ರ ವಾಪಸು ಪಡೆಯುವ ದಿನವಾದ ಡಿ.14 ರಂದು ಅಂತಿಮ ಕಣದ ಚಿತ್ರಣ ಲಭ್ಯವಾಗಲಿದೆ.

ಒಂದಕ್ಕಿಂತ ಹೆಚ್ಚು ನಾಮಪತ್ರ

ಸಾಕಷ್ಟು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿರುವುದರಿಂದ ಎಂಟು ತಾಲೂಕುಗಳ 2139 ಸ್ಥಾನಗಳಿಗೆ 7048 ನಾಮಪತ್ರಗಳು ಬಂದಿದ್ದು, ಅವುಗಳಲ್ಲಿ 87 ನಾಮಪತ್ರಗಳು ತಿರಸ್ಕøತಗೊಂಡಿವೆ.

ಅಜ್ಜಂಪುರ ತಾಲೂಕಿನ 24 ಗ್ರಾಪಂಗಳ 223 ಸ್ಥಾನಗಳಿಗೆ 722 ಮಂದಿ, ಚಿಕ್ಕಮಗಳೂರು ತಾಲೂಕಿನ 41 ಗ್ರಾಪಂಗಳ 432 ಸ್ಥಾನಗಳಿಗೆ 1133 ಮಂದಿ, ಕಡೂರು ತಾಲೂಕಿನ 49 ಗ್ರಾಪಂಗಳ 497 ಸ್ಥಾನಗಳಿಗೆ 1671 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ಸಿಂಧುವಾಗಿವೆ.

ಕೊಪ್ಪ ತಾಲೂಕಿನ 21 ಗ್ರಾಪಂಗಳ 193 ಸ್ಥಾನಗಳಿಗೆ 553 ಅಭ್ಯರ್ಥಿಗಳು, ಮೂಡಿಗೆರೆ ತಾಲೂಕಿನ 26 ಗ್ರಾಪಂಗಳ 281 ಸ್ಥಾನಗಳಿಗೆ 895, ಶೃಂಗೇರಿ ತಾಲೂಕಿನ 9 ಗ್ರಾಪಂಗಳ 86 ಸ್ಥಾನಗಳಿಗೆ 245, ತರೀಕೆರೆ ತಾಲೂಕಿನ 25 ಗ್ರಾಪಂಗಳ 273 ಸ್ಥಾನಗಳಿಗೆ 969 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿವೆ.

ಚುನಾವಣೆ ಮುಂದೂಡಿಕೆ ಅನಿವಾರ್ಯ

ಜಿಲ್ಲೆಯಲ್ಲಿ 10 ಗ್ರಾಪಂಗಳ ಒಟ್ಟು 110 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದಿರುವ ಹಿನ್ನೆಲೆಯಲ್ಲಿ ಅವುಗಳ ಚುನಾವಣೆ ಮುಂದೂಡುವುದು ಅನಿವಾರ್ಯ. ಚಿಕ್ಕಮಗಳೂರು ತಾಲೂಕಿನಲ್ಲಿ 70, ಎನ್.ಆರ್.ಪುರ ತಾಲೂಕಿನಲ್ಲಿ 28, ಮೂಡಿಗೆರೆ ತಾಲೂಕಿನಲ್ಲಿ 8, ತರೀಕೆರೆ ತಾಲೂಕಿನಲ್ಲಿ 2, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳ ತಲಾ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಕಸ್ತೂರಿ ರಂಗನ್ ವರದಿ ಮತ್ತು ಪರಿಸರ ಸೂಕ್ಷ್ಮ ವಲಯ ವಿರೋಧಿಸಿ ಚುನಾವಣೆ ಬಹಿಷ್ಕರಿಸುವ ತೀರ್ಮಾನ ಕೈಗೊಂಡ ಬಳಿಕ ಮಲೆನಾಡು ಭಾಗದ 17 ಗ್ರಾಪಂಗಳಲ್ಲಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲು ಹೋರಾಟ ಸಮಿತಿ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಭಾನುವಾರ ಪ್ರಯತ್ನ ನಡೆಸಿದ್ದು, ಸಾಕಷ್ಟು ಕಡೆಗಳಲ್ಲಿ ಈ ಪ್ರಯತ್ನಕ್ಕೆ ಸಕಾರಾತ್ಮಕ ಯಶಸ್ಸು ದೊರಕಿಲ್ಲವೆನ್ನಲಾಗಿದೆ.

ಕಣದಿಂದ ಹಿಂದೆ ಸರಿಸುವ ಯತ್ನಕ್ಕೆ ಹಿನ್ನಡೆ

ನಗರದಲ್ಲಿ ಶನಿವಾರ ನಡೆದ ಸರ್ವಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಸಭೆಯಲ್ಲಿ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಒಗ್ಗಟ್ಟಿನ ಪ್ರಯತ್ನ ನಡೆಸುವಂತೆ ತೀರ್ಮಾನಿಸಲಾಗಿತ್ತು. ಸಭೆಯಲ್ಲಿದ್ದ ರಾಜಕೀಯ ಮುಖಂಡರಲ್ಲಿ ಹಲವರು ಈ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎನ್ನಲಾಗಿದೆ.

ಕರ್ನಾಟಕ ಬೆಳೆಗಾರರ ಒಕ್ಕೂಟ, ಖಾಂಡ್ಯ ನಾಗರಿಕ ಹೋರಾಟ ಸಮಿತಿ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಮುಖಂಡರು ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಅನೇಕ ಕಡೆಗಳಲ್ಲಿ ಕಣದಲ್ಲುಳಿಯುವ ಅಭ್ಯರ್ಥಿಗಳ ತೀರ್ಮಾನದ ಬಗ್ಗೆ ಅನುಮಾನಗಳಿರುವುದರಿಂದ ಪರಸ್ಪರ ಅಪನಂಬಿಕೆಗೆ ಕಾರಣವಾಗಿದೆ ಎಂದು ಹೋರಾಟ ಸಮಿತಿಯ ಮೂಲಗಳು ಹೇಳಿವೆ. ನಾಮಪತ್ರ ಹಿಂಪಡೆಯುವ ದಿನವಾದ ಸೋಮವಾರ ಮಧ್ಯಾಹ್ನ 3 ಗಂಟೆ ಬಳಿಕವಷ್ಟೇ ಈ ಪ್ರಯತ್ನದ ಫಲಶ್ರುತಿ ಗೊತ್ತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net