ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಿ

web 1
Published on

ಚಿಕ್ಕಮಗಳೂರು: ಪ್ರಸಕ್ತ ವರ್ಷ ಏಪ್ರಿಲ್​ವರೆಗೆ ಅನ್ವಯವಾಗುವಂತೆ ಕಾಫಿ ಬೆಳೆಗಾರರ ಎಲ್ಲ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕೆಜಿಎಫ್ (ಕರ್ನಾಟಕ ಬೆಳೆಗಾರರ ಒಕ್ಕೂಟ) ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್ ಆಗ್ರಹಿಸಿದರು.

ಅಲ್ಪಾವಧಿ ಸಾಲಗಳನ್ನು ದೀರ್ಘಾವಧಿಗೆ ಬದಲಾಯಿಸಬೇಕು. ಶೇ.3ರ ಬಡ್ಡಿ ದರದಲ್ಲಿ ಸಾಲ ಮರುಪಾವತಿ ಮಾಡಲು 10 ವರ್ಷಗಳವರೆಗೆ ಕಾಲಾವಧಿ ವಿಸ್ತರಿಸುವ ಜತೆಗೆ ಹೊಸ ಸಾಲ ಒದಗಿಸಬೇಕು. ತೋಟಗಳಲ್ಲಿ ಮರುನಾಟಿ, ನೀರಾವರಿ ವ್ಯವಸ್ಥೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಸಹಾಯಧನ ಹೆಚ್ಚಿಸಬೇಕು. ಪ್ಲಾಂಟೇಶನ್ ಕೆಲಸಗಳನ್ನು ನರೇಗಾ ವ್ಯಾಪ್ತಿಗೆ ತರಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಮಾರುಕಟ್ಟೆಯಲ್ಲಿ ಕಾಫಿಗೆ ಪ್ರಸ್ತುತ 26 ವರ್ಷದ ಹಿಂದಿನ ದರವಿದೆ. 5 ವರ್ಷದಲ್ಲಿ ಕಾಫಿ ಬೆಲೆ ಗಮನಿಸಿದರೆ ಅರೇಬಿಕಾಗೆ ಶೇ.38, ರೋಬಸ್ಟಾಗೆ ಶೇ.8ರಷ್ಟು ನಷ್ಟವಾಗುತ್ತಿದೆ. ತೋಟಗಳ ನಿರ್ವಹಣೆ ವೆಚ್ಚ ಗಗನಕ್ಕೇರಿರುವುದೇ ಇದಕ್ಕೆ ಕಾರಣ. ಜತೆಗೆ ಬಿಳಿಕಾಂಡ ಕೊರಕದ ಬಾಧೆ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ. ಪ್ರತಿ ವರ್ಷ ಶೇ.30ರಷ್ಟು ಮೂಲ ಬಂಡವಾಳ ನಷ್ಟವಾಗಿದೆ ಎಂದು ಹೇಳಿದರು.

ಕಾಫಿ ಉದ್ಯಮ ಹಲವು ಸಂಕಷ್ಟಗಳಿಗೆ ಸಿಲುಕಿದ್ದು, ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು. ಕಾಫಿ ಉದ್ಯಮ, ಇದನ್ನೇ ಅವಲಂಬಿಸಿರುವ ಬೆಳೆಗಾರರು ಹಾಗೂ ಕಾರ್ವಿುಕರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆದರೂ ನೆರವು ಒದಗಿಸಿಲ್ಲ. ಸರ್ಕಾರ ಬೆಳೆಗಾರರ ನೆರವಿಗೆ ಬಾರದಿದ್ದಲ್ಲಿ ತೋಟಗಳಲ್ಲಿ ಎಲ್ಲ ಕೆಲಸ ಸ್ಥಗಿತವಾಗಲಿವೆ. ಹಾಗಾದರೆ ಸಾಮಾಜಿಕ ಅರಾಜಕತೆ, ಹಸಿವು ಮತ್ತಿತರೆ ಸಮಸ್ಯೆಗಳು ಎದುರಾಗಲಿವೆ. ಆಗ ಗ್ರಾಪಂ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net