

ಎಚ್.ಆರ್.ದೇವರಾಜ್ ಕಡೂರು
ಜಿಲ್ಲೆಯ ಎಪಿಎಂಸಿಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಇರುವ ಸಿಬ್ಬಂದಿ ಮೇಲೆ ಕಾರ್ಯಭಾರದ ಒತ್ತಡ ಹೆಚ್ಚಿ ಹಲವಾರು ಪ್ರಮುಖ ಕೆಲಸಗಳು ಬಾಕಿ ಉಳಿದುಕೊಳ್ಳುತ್ತಿವೆ. ಜಿಲ್ಲೆಯ ಎಪಿಎಂಸಿ ಸಹಾಯಕ ನಿರ್ದೇಶಕ ಕಚೇರಿ ಸೇರಿದಂತೆ ಐದು ಎಪಿಎಂಸಿಗಳಲ್ಲಿ ಮಾರುಕಟ್ಟೆಗಳಿದ್ದು ಎಲ್ಲ ಎಪಿಎಂಸಿಗಳಲ್ಲಿ 51 ಹುದ್ದೆಗಳು ಖಾಲಿಯಿವೆ.
ಈಗಾಗಲೇ ಹಲವು ಎಪಿಎಂಸಿಗಳಲ್ಲಿ ಕೆಲವು ಕೆಲಸಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ. ಚಿಕ್ಕಮಗಳೂರು, ಕಡೂರಿನಂತಹ ದೊಡ್ಡ ಎಪಿಎಂಸಿಗಳು ಬಾಡಿಗೆ ಹಾಗೂ ಇತರೆ ಆದಾಯ ಮೂಲಗಳನ್ನು ಸೃಷ್ಟಿಸಿಕೊಂಡಿದ್ದು, ಅದರ ಖರ್ಚು ವೆಚ್ಚ ನೋಡಿಕೊಳ್ಳುತ್ತಿವೆ. ಆದರೆ ಸಣ್ಣಪುಟ್ಟ ಎಪಿಎಂಸಿಗಳು ಆದಾಯವಿಲ್ಲದೆ ಸೊರಗಿದ್ದು, ಹೊರಗುತ್ತಿಗೆ ನೀಡಲೂ ಹಣವಿಲ್ಲದಂತಾಗಿದೆ.
ಹೆಚ್ಚಿದ ಒತ್ತಡ: ಜಿಲ್ಲೆಯ ಎಪಿಎಂಸಿಗಳಲ್ಲಿ ಮಂಜೂರಾಗಿರುವ 68 ಹುದ್ದೆಗಳಲ್ಲಿ 17 ಹುದ್ದೆಗಳ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಭದ್ರತಾ ಸಿಬ್ಬಂದಿ, ಚಾಲಕ, ಕಂಪ್ಯೂಟರ್ ಡೇಟಾ ಆಪರೇಟರ್, ಎಲೆಕ್ಟ್ರೀಷಿಯನ್, ಪ್ಲಂಬರ್ ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಜವಾಬ್ದಾರಿಯುತ ಅಧಿಕಾರಿಗಳ ಮಟ್ಟದ ಹುದ್ದೆಗಳು ಖಾಲಿಯಿದ್ದು, ಈ ಕೆಲಸಗಳಿಗೆ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗದೇ ಎಷ್ಟು ಸಾಧ್ಯವೋ ಅಷ್ಟು ಕೆಲಸಗಳನ್ನು ಇರುವ ಅಧಿಕಾರಿಗಳೇ ಮಾಡುವಂತಾಗಿದೆ. ಹೆಚ್ಚುವರಿ ಕೆಲಸಕ್ಕೆ ಯಾವುದೇ ಹೆಚ್ಚುವರಿ ಸಂಭಾವನೆಯೂ ಇಲ್ಲದೇ ಮಾನಸಿಕ ಮತ್ತು ದೈಹಿಕವಾಗಿ ಶ್ರಮಿಸುವಂತಾಗಿದೆ.
ರೈತರು ತಾವು ಬೆಳೆದ ದವಸ-ಧಾನ್ಯಗಳು, ಅಡಕೆ, ಕೊಬ್ಬರಿ ಮುಂತಾದ ಪ್ರಮುಖ ವಾಣಿಜ್ಯ ಬೆಳೆಗಳನ್ನು ಎಪಿಎಂಸಿಗಳಿಗೆ ತಂದು ಮಾರುತ್ತಾರೆ. ಇಲ್ಲಿ ವರ್ತಕರು, ದಲ್ಲಾಳಿಗಳಿಂದ ರೈತರಿಗೆ ಯಾವುದೇ ರೀತಿಯ ಮೋಸ ಆಗದಂತೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳುವುದು ಎಪಿಎಂಸಿ ಜವಾಬ್ದಾರಿ. ಸಂಪೂರ್ಣ ಲೆಕ್ಕ ಇಡುವುದು, ವಿಂಗಡಿಸುವುದು, ರೈತರಿಗೆ ತೂಕ ಹಾಗೂ ಬೆಲೆಯಲ್ಲಿ ಮೋಸವಾದಂತೆ ನೋಡಿಕೊಳ್ಳುವುದು ಸೇರಿದಂತೆ ಗೋದಾಮುಗಳ ನಿರ್ವಹಣೆ, ಹರಾಜು ಪ್ರಕ್ರಿಯೆ ರೈತರ ವರ್ತಕರ ನೋಂದಣಿ, ಹೊಸ ಲೈಸೆನ್ಸ್ ನೀಡುವುದು ಮತ್ತು ನವೀಕರಿಸುವುದು ಇನ್ನೂ ಅನೇಕ ಕೆಲಸಗಳ ಹೊಣೆಗಾರಿಗೆ ಎಪಿಎಂಸಿ ಸಿಬ್ಬಂದಿಯ ಮೇಲೆ ಇದೆ. ಈ ಎಲ್ಲ ನಿರ್ವಹಣೆ ಸುಸೂತ್ರವಾಗಿ ಆಗಲು ಸಿಬ್ಬಂದಿ ಅವಶ್ಯಕತೆ ಹೆಚ್ಚಿದೆ. ಮಂಜೂರಾಗಿರುವ ಹುದ್ದೆಗಳಿಗೆ ಕಳೆದ 12 ವರ್ಷದಿಂದ ರಾಜ್ಯ ಸರ್ಕಾರ ಭರ್ತಿ ಮಾಡದೆ ಹಾಗೆಯೇ ಉಳಿಸಿಕೊಂಡಿದೆ. ಬಹುಮುಖ್ಯವಾಗಿ ಕಳೆದ ಮೂರು ವರ್ಷದಿಂದ ಆಡಳಿತ ಮಂಡಳಿಯೇ ಇಲ್ಲದೆ ಅಭಿವೃದ್ಧಿಗೂ ತೊಡಕಾಗಿದ್ದು, ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಎಪಿಎಂಸಿಗಳಿಗೆ ಸರ್ಕಾರ ಬಲ ತುಂಬಬೇಕಿದೆ.
ಕಡೂರಲ್ಲಿ 7 ಜನರು ಮಾತ್ರ ಕೆಲಸ: ಬೆಂಗಳೂರು-ಹೊನ್ನಾವರ ಮಾರ್ಗದ ರಾಜ್ಯ ಹೆದ್ದಾರಿಯ ಮಾರ್ಗದಲ್ಲಿರುವ ಜಿಲ್ಲೆಯ ಅತಿದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆ ಹೊಂದಿರುವ ಕಡೂರಿನ ಎಪಿಎಂಸಿಯಲ್ಲಿ 22 ಹುದ್ದೆಗಳಿದ್ದರೂ 7 ಸಿಬ್ಬಂದಿ ಗಳಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಉಳಿದ ಎಪಿಎಂಸಿಗಳಿಗೆ ಹೋಲಿಸಿ ಇಲ್ಲಿನ ಹೆಚ್ಚಿನ ಸಿಬ್ಬಂದಿ ಇದ್ದಾರೆ ಎಂಬುದೇ ಸಮಾಧಾನಕರ ಸಂಗತಿ. ವಾಸ್ತವವಾಗಿ ನಿಗದಿತ ಕೆಲಸದ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡುವಂತಾಗಿದೆ. ಆದರೂ ಮಾರುಕಟ್ಟೆಯಲ್ಲಿ ಮಾಡಬೇಕಿರುವ ಬಹಳಷ್ಟು ಕೆಲಸಗಳು ಬಾಕಿಯಿವೆ. ಜತೆಯಲ್ಲಿ ಕಡೂರು ತಾಲೂಕಿನಲ್ಲಿ ವ್ಯಾಪ್ತಿ ಬೆಳೆದಂತೆ ಬೀರೂರು, ಅಂತರಘಟ್ಟೆ ಹಾಗೂ ಪಂಚನಹಳ್ಳಿ ಎಪಿಎಂಸಿಗಳ ಉಪ ಮಾರುಕಟ್ಟೆಗಳಲ್ಲಿಯೂ ಸಿಬ್ದಂದಿ ಕೊರತೆ ಎದುರಿಸುವಂತಾಗಿದೆ.
ಜಿಲ್ಲೆಯ ಐದು ಎಪಿಎಂಸಿಗಳಲ್ಲಿ 51 ಸಿಬ್ಬಂದಿ ಕೊರತೆಯಿದೆ. ನಾವು ಒಂದೂವರೆ ತಿಂಗಳಿನಿಂದ ಇಲ್ಲಿ ಸಹಾಯಕ ನಿರ್ದೇಶಕ ಹುದ್ದೆ ನಿರ್ವಹಿಸುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಸಾಕಷ್ಟು ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ.ವಿಶ್ವನಾಥರೆಡ್ಡಿ, ಸಹಾಯಕ ನಿರ್ದೇಶಕರು ಚಿಕ್ಕಮಗಳೂರು ಎಪಿಎಂಸಿ