ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಮತ್ತೆ ಶುರುವಾಯ್ತು ಟಾಕೀಸ್..!

300722 Chikkajogihalli Theater Talkies Open
ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯಲ್ಲಿ ಸ್ಥಗಿತವಾಗಿದ್ದ ಚಿತ್ರಮಂದಿರ ದಶಕ ನಂತರ ಗುರುವಾರ ಆರಂಭವಾಗಿರುವ ಕಾರಣ ಯುವಕರು ಮಂದಿರವನ್ನು ಶೃಂಗಾರ ಮಾಡಿರುವುದು.
Published on

ಭೀಮಸಮುದ್ರ ರಂಗನಾಥ ಕಾನಹೊಸಹಳ್ಳಿ

ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕಾರಣಾಂತರದಿಂದ ಸ್ಥಗಿತವಾಗಿದ್ದ ಚಿತ್ರಮಂದಿರವೊಂದು ದಶಕಗಳ ನಂತರ ಮತ್ತೆ ಆರಂಭವಾಗಿದ್ದು, ಈ ಭಾಗದ ಗ್ರಾಮೀಣ ಜನರ, ಅದರಲ್ಲೂ ವಿಶೇಷವಾಗಿ ಯುವ ಸಿನಿ ರಸಿಕರ ಸಂತೋಷಕ್ಕೆ ಪಾರವೇ ಇಲ್ಲ ಎನ್ನುವಂತಾಗಿದೆ. ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದೊಂದಿಗೆ ಗುರುವಾರ ಈ ಥಿಯೇಟರ್ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.

ಈ ಚಿತ್ರಮಂದಿರವನ್ನು ರಾಜ್ಯದ ಮೊದಲ ಮಾದರಿ ಗ್ರಾಮವಾದ ಚಿಕ್ಕಜೋಗಿಹಳ್ಳಿಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಸಕ್ತಿ ಹಾಗೂ ಗ್ರಾಮಾಭಿವೃದ್ಧಿಯ ಕನಸುಗಾರ ಮಾದರಿ ಗ್ರಾಮದ ರೂವಾರಿ ಕೆ.ವೆಂಕಟಸ್ವಾಮಿ ಅವರ ವಿಶೇಷ ಶ್ರಮದಿಂದ 70ರ ದಶಕದಲ್ಲಿ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಇದು ಆರಂಭವಾಗಿದ್ದು, ಕನ್ನಡ ಸಿನಿ ಲೋಕದ ಮೇರು ನಟರಾದ ಡಾ.ರಾಜ್‌ಕುಮಾರ್, ಹಾಸ್ಯ ಖಳನಟ ಟಿ.ಎನ್. ಬಾಲಕೃಷ್ಣ, ಹಾಸ್ಯ ಚಕ್ರವರ್ತಿ ನರಸಿಂಹ ರಾಜು, ನಾಯಕ, ಖಳ ನಟ ಉದಯಕುಮಾರ್, ಮತ್ತೊಬ್ಬ ನಾಯಕ ನಟ ಕಲ್ಯಾಣಕುಮಾರ್ ಹಾಗೂ ನಟಿ ಲೀಲಾವತಿ ಚಿಕ್ಕಜೋಗಿಹಳ್ಳಿಗೆ ಆಗಮಿಸಿ ಭೂಮಿಪೂಜೆ ನೆರವೇರಿಸಿದ್ದರು. ಸಿನಿಮಾ ಟಾಕಿಸ್ ಪೂರ್ಣಗೊಂಡ ನಂತರ ಕೆ.ವೆಂಕಟಸ್ವಾಮಿ, ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಹಾಗೂ ಖ್ಯಾತ ನಟಿ ಭಾರತಿ ವಿಷ್ಣುವರ್ಧನ ಸೇರಿ ಅನೇಕ ಖ್ಯಾತ ಸಿನಿಮಾ ಕಲಾವಿದರು ಇಲ್ಲಿಗೆ ಬಂದು 70ರ ದಶಕದಲ್ಲಿ ಈ ಚಿತ್ರಮಂದಿರಕ್ಕೆ ಚಾಲನೆ ನೀಡಿದ್ದರು. ಆ ಮೂಲಕ ಚಿಕ್ಕಜೋಗಿಹಳ್ಳಿಯಲ್ಲಿ ಮೊದಲ ಸರ್ಕಾರಿ ಚಿತ್ರಮಂದಿರ ಹೊಂದಿದ ಕೀರ್ತಿ ಈ ಗ್ರಾಮಕ್ಕಿದೆ.

ಇತ್ತೀಚಿನ ವರ್ಷಗಳಲ್ಲಿ ಕಾರಣಾಂತರದಿಂದ ಚಿತ್ರಮಂದಿರ ಪ್ರದರ್ಶನವನ್ನು ಸ್ಥಗಿತಗೊಳಿಸಿತ್ತು. ಇದೀಗ ದಶಕ ನಂತರ ಮತ್ತೆ ಆರಂಭವಾಗಿದೆ. ಹಳ್ಳಿ ಜನಕ್ಕೆ ಸಿನಿಮಾ ಮೂಲಕ ಮನರಂಜನೆ ಅನುಭವ ಮರುಕಳಿಸುವಂತೆ ಮಾಡಿದೆ. ಚಿತ್ರಮಂದಿರ ಮರು ನವೀಕರಣಗೊಂಡು ಸುಸಜ್ಜಿತವಾಗಿ ಹೊಸ ವಿನ್ಯಾಸ ಹಾಗೂ ಸಂಪೂರ್ಣ ಹವಾನಿಯಂತ್ರಿತದಿಂದ ಕೂಡಿ ಹೈಟೆಕ್ ರೂಪದೊಂದಿಗೆ ಪ್ರದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಆರಂಭದಲ್ಲಿ ಸರ್ಕಾರಿ ಚಿತ್ರಮಂದಿರವಾದ ಕಾರಣ ‘ಜನತಾ ಟಾಕಿಸ್’ ಎಂಬ ಹೆಸರಿನಿಂದ ಪ್ರಸಿದ್ಧಯಾಗಿತ್ತು. ಮೂರು ದಶಕಗಳ ಕಾಲ ಸಿನಿಮಾ ಪ್ರಿಯರ ಮನಗೆದ್ದು ಚಿತ್ರಮಂದಿರ ಕಾರ್ಯನಿರ್ವಹಿಸಿತ್ತು. ಕನ್ನಡ, ತೆಲಗು ಸೇರಿ ಹಲವು ಭಾಷೆಗಳ ಚಲನಚಿತ್ರಗಳನ್ನು ಇದು ಪ್ರದರ್ಶನ ಮಾಡುತ್ತ ಬಂದಿತ್ತು. ಆ ದಿನಗಳಲ್ಲಿ ಸಿನಿಮಾ ನೋಡಲು ಚಿತ್ರಮಂದಿಕ್ಕೆ ಕಿಕ್ಕಿರಿದು ಜನ ಸೇರುತ್ತಿದ್ದರು. ಆದರೆ ನಂತರ ಟಿವಿ, ಧಾರಾವಾಹಿ, ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಜನರು ಚಿತ್ರಮಂದಿರಗಳತ್ತ ಜನರ ಆಗಮನ ಕಡಿಮೆ ಆದ ಕಾರಣ ನಷ್ಟಕ್ಕೊಳಗಾಗಿ ಚಿತ್ರಮಂದಿರ ಸ್ಥಗಿತಗೊಂಡಿತ್ತು. ಮತ್ತೆ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದೊಂದಿಗೆ ಮರು ಹುಟ್ಟು ಕಂಡುಕೊಂಡಿದೆ.

ನಮ್ಮ ತಾತ ಕೆ.ವೆಂಕಟಸ್ವಾಮಿ ಅವರ ಶ್ರಮದಿಂದ ಜನತಾ ಟಾಕಿಸ್ ನಿರ್ಮಿಸಲಾಗಿತ್ತು. ನಂತರ ಅದು ಖಾಸಗಿಯವರ ಪಾಲಾಯಿತು. ಸಿನಿಮಾ ಆಸಕ್ತರ ಕೊರತೆಯಿಂದ ಸ್ಥಗಿತವೂ ಆಯಿತು. ಮತ್ತೆ ಆರಂಭವಾಗಿದೆ. ನಮ್ಮ ತಾತನವರ ಕನಸು ಮತ್ತೆ ಮರು ಜನ್ಮ ಪಡೆದಿರುವುದಕ್ಕೆ ಸಂತಸವಾಗುತ್ತಿದೆ.ಕೆ.ಆರ್.ಸತ್ಯಬಾಬು| ಜಿಪಂ ಮಾಜಿ ಸದಸ್ಯ, ಚಿಕ್ಕಜೋಗಿಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net