

ಕಂಪ್ಲಿ: ಜಗತ್ತಿನಲ್ಲಿ ಯಾವ ವಸ್ತುನೂ ವ್ಯರ್ಥವಲ್ಲ. ಅದನ್ನು ಮರು ಬಳಕೆ ಮಾಡುವ ಜಾಣ್ಮೆಯಿರಬೇಕು ಅಷ್ಟೇ. ಇದಕ್ಕೆ ಉದಾಹರಣೆ ಎಂಬಂತೆ ರೈತನೊಬ್ಬ ಬಿತ್ತನೆ ಬೀಜ, ಸಸಿಗಳನ್ನು ಪಕ್ಷಿಗಳಿಂದ ಕಾಪಾಡಲು ಬೀರ್ ಬಾಟಲ್‌ಗಳ ಮೊರೆ ಹೋಗಿದ್ದಾರೆ.
ತಾಲೂಕಿನ ಚಿಕ್ಕಜಾಯಿಗನೂರಿನ ರೈತ ವಡ್ಡರ ಯರ‌್ರಿಸ್ವಾಮಿ ಬಾಟಲಿ ಪ್ರಯೋಗ ಮಾಡಿದವರು. ವ್ಯರ್ಥವಾದ ಖಾಲಿ ಬೀರ್ ಬಾಟಲ್‌ಗಳನ್ನು ಉಪಯೋಗಿಸಿಕೊಂಡು ಪಕ್ಷಿಗಳನ್ನು ಓಡಿಸುವ ಉಪಾಯವನ್ನು ಕಂಡುಕೊಂಡಿದ್ದಾರೆ.
ಚಿಕ್ಕಜಾಯಿಗನೂರು ಗ್ರಾಮಕ್ಕೆ ತೆರಳುವ ಹಾದಿಯಲ್ಲಿ ಭತ್ತದ ಸಸಿ ಮಡಿ ಹಾಕಿದ್ದಾರೆ. ಆರಂಭದಲ್ಲಿ ಬೀಜ ನಂತರ ಸಸಿಗಳ ಬೆಳವಣಿಗೆ ಸಂದರ್ಭದಲ್ಲಿ ಗಿಳಿ, ಪಾರಿವಾಳ, ಗುಬ್ಬಿ, ಕೊಕ್ಕರೆ, ಕಪ್ಪು ಬಾತುಕೋಳಿಗಳಿಂದ ಕಾಪಾಡಲು ಬೀರ್‌ಬಾಟಲ್‌ಗಳನ್ನು ಸರತಿಸಾಲಿನಲ್ಲಿ ಕಟ್ಟಿದ್ದಾರೆ. ನಾಲ್ಕಡಿ ಅಂತರದಲ್ಲಿ ಖಾಲಿ ಬೀರ್ ಬಾಟಲ್‌ಗಳನ್ನು ಒಂದಕ್ಕೊಂದು ತಾಕುವಂತೆ ಕಟ್ಟಿದ್ದಾರೆ. ಅಲ್ಲದೆ ಮೊದಲ ಬಾಟಲ್‌ಗೆ ತಾಗುವಂತೆ ವ್ಯರ್ಥ ಬೀಜದ ಚೀಲವೊಂದನ್ನು ಕಟ್ಟಿದ್ದಾರೆ. ಈ ಥರ ಗದ್ದೆಯ ಮೂರು ದಿಕ್ಕಿಗೂ ಕಟ್ಟಿದ್ದಾರೆ. ಗಾಳಿಗೆ ಚೀಲ ಮೊದಲ ಬಾಟಲ್‌ಗೆ ತಾಕಿ ಬಾಟಲ್‌ಗಳು ಸದ್ದು ಮಾಡುತ್ತವೆ. ಇದರಿಂದ ಹಕ್ಕಿಗಳು ಸಸಿ ಮಡಿಯತ್ತ ಬರುವ ಧೈರ್ಯ ಮಾಡುವುದಿಲ್ಲ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ತುಂಗಾನದಿ ಅಬ್ಬರ, 21 ಗೇಟ್ ಒಪನ್
ಮಡಿಯಲ್ಲಿ ಭತ್ತ ಬೀಜ ಉಗ್ಗಿದ ದಿನದಿಂದ ಸಸಿ ಸಂಫೂರ್ಣ ಬೆಳವಣಿಗೆಯಾಗುವ ತನಕ ಪಕ್ಷಿಗಳ ಕಾಟ ತಪ್ಪಿದ್ದಲ್ಲ. ಮೊದಲಿಗೆ ಬೀಜ ತಿನ್ನಲು ಪಕ್ಷಿಗಳು ಬರುತ್ತವೆ. ನಂತರ ಎಳೆ ಸಸಿಗಳನ್ನು ಕಿತ್ತು ತಿನ್ನಲು ಬರುತ್ತವೆ. ಇವುಗಳನ್ನು ಓಡಿಸಲು ಒಬ್ಬರಿಗೆ ಕೂಲಿ ಕೊಡುವ ಸ್ಥಿತಿ ಇತ್ತು. ಈಗ ಬೀರ್‌ಬಾಟಲ್‌ಗಳ ಸದ್ದಿಗೆ ಪಕ್ಷಿಗಳು ಬರುವುದಿಲ್ಲ. ಒಂದು ಆಳಿನ ಕೂಲಿ ಉಳಸಿದಂತಾಗಿದೆ ಎಂದು ರೈತರಾದ ವಡ್ಡರ ಯರ‌್ರಿಸ್ವಾಮಿ, ಜೆ.ಕಾಟಂರಾಜು ಅಭಿಪ್ರಾಯ ವ್ಯಕ್ತಪಡಿಸಿದರು.