

ಸರಗೂರು: ತಾಲೂಕಿನ ಇಟ್ನಾ ಗ್ರಾಮದಲ್ಲಿರುವ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಶ್ರೀ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಇಟ್ನಾ ಗ್ರಾಮದಲ್ಲಿ ನೆರವೇರಿತು.
ಶ್ರೀ ಚಿಕ್ಕದೇವಮ್ಮ ಬೆಟ್ಟದಲ್ಲಿ ತಾಯಿ ಚಿಕ್ಕ ದೇವಮ್ಮನವರಿಗೆ ಬೆಳಗ್ಗೆ ಅಭಿಷೇಕ, ಹೋಮ, ಕುಂಕುಮಾರ್ಚನೆ ಸೇರಿದಂತೆ ಇನ್ನಿತರ ಪೂಜಾ ವಿಧಿವಿಧಾನಗಳು ನೆರವೇರಿದವು.
ನಂತರ ಇಟ್ನ ಗ್ರಾಮದ ಗ್ರಾಮಸ್ಥರು ಸಮ್ಮುಖದಲ್ಲಿ ಚಿಕ್ಕದೇವಮ್ಮನವರ ಬೆಟ್ಟದಿಂದ ಉತ್ಸವ ಮೂರ್ತಿಯನ್ನು ಮಂಗಳವಾದ್ಯ ಸತ್ತಿಗೆಯೊಂದಿಗೆ ಕಪಿಲಾ ನದಿಯ ಹಾಲುಗಡಕ್ಕೆ ತಂದು ಕಪಿಲಾ ನದಿ ಮಧ್ಯಭಾಗದಲ್ಲಿ ಕಲ್ಲಿನ ಮೇಲೆ ಮಂಟಪ ನಿರ್ಮಿಸಿ, ಅಲ್ಲಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಹಾಲಗಡದಿಂದ ಸಂಜೆ 4 ಗಂಟೆಗೆ ಇಟ್ನ ಗ್ರಾಮಕ್ಕೆ ತಾಯಿ ಚಿಕ್ಕದೇವಮ್ಮನ ಉತ್ಸವ ಮೂರ್ತಿಯನ್ನು ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಇಟ್ಟ ಗ್ರಾಮದಲ್ಲಿ ವಿದ್ಯುತ್ ದೀಪ ಹಾಗೂ ವಿವಿಧ ಹೂಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯ ಮೇಲೆ ದೇವಿಯನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ, ಬ್ಯಾಂಡ್ ಸೆಟ್, ಚಂಡೆ ಹಾಗೂ ಕಲಾತಂಡಗಳ ಜತೆಯಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಲಾಯಿತು.
ಭಕ್ತರಿಗೆ ಅನ್ನಸಂತರ್ಪಣೆ: ಭಕ್ತರು ತಾಯಿ ಚಿಕ್ಕದೇವಮ್ಮನಿಗೆ ಮುಡಿಸೇವೆ ಸೇರಿದಂತೆ ಇನ್ನಿತರ ಸೇವೆಗಳನ್ನು ಸಲ್ಲಿಸುವ ಮೂಲಕ ಹರಕೆ ಒಪ್ಪಿಸಿದರು.
ರಾತ್ರಿ ಇಟ್ನಾ ಗ್ರಾಮದ ಚಿಕ್ಕದೇವಮ್ಮನ ಕೃಪಾ ಪೋಷಿತಾ ನಾಟಕ ಮಂಡಳಿ ವತಿಯಿಂದ ಸಂಸಾರ ಬಂಧನ ಹಾಗೂ ಅಣ್ಣನ ಸೇಡು ತಂಗಿಯ ಕಣ್ಣೀರು ಎಂಬ ಸಾಮಾಜಿಕ ನಾಟಕ ನಡೆಯಿತು. ಜಾತ್ರಾ ಮಹೋತ್ಸವದಲ್ಲಿ ಕಡ್ಡಾಯವಾಗಿ ಪ್ರಾಣಿಬಲಿಯನ್ನು ನಿಷೇಧಿಸಲಾಗಿತ್ತು. ಸರಗೂರು ಠಾಣೆ ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿದ ದೇವಿ ದರ್ಶನ ಪಡೆದು ಪೂಜೆ ನೆರವೇರಿಸಿದರು. ಜಿಪಂ ಮಾಜಿ ಸದಸ್ಯ ಪಿ.ರವಿ, ಚಿಕ್ಕಮಾದು ಅಭಿಮಾನಿಗಳು ಬಳಗದ ಅಧ್ಯಕ್ಷ ರಾಜನಾಯಕ, ಈರೇಗೌಡ ,ಇಟ್ನ ಗ್ರಾಮದ ಚಿಕ್ಕ ದೇವಮ್ಮ ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಯಕ, ಗ್ರಾಪಂ ಸದಸ್ಯ ಜಯರಾಮ, ಮುಖಂಡರಾದ ನಿಂಗರಾಜು, ನಾಗರಾಜು ಕೆ, ಬಿ.ಬೆಟ್ಟನಾಯಕ, ಎನ್.ಬಸವ ನಾಯಕ, ಬಿ.ಬಸವರಾಜು, ಐ.ಬಿ.ರವಿಕುಮಾರ, ನಾಗೇಂದ್ರ , ಶೇಷ, ಮಂಚನಾಯಕ, ಬಿ.ರಾಮನಾಯಕ, ಬೆಟ್ ನಾಯ್ಕ, ಡಾ. ಸೋಮಣ್ಣ, ಈರನಾಯಕ, ಶಂಭುಲಿಂಗನಾಯಕ ಇತರರಿದ್ದರು.