ಸರಗೂರಿನಲ್ಲಿ ಶ್ರೀ ಚಿಕ್ಕದೇವಮ್ಮನವರ ವಾರ್ಷಿಕೋತ್ಸವ

04 SARAG 1
ಸರಗೂರು ಪಟ್ಟಣದ 9ನೇ ವಾರ್ಡಿನ ನಾಯಕ ಜನಾಂಗದಿಂದ ಚಿಕ್ಕದೇವಮ್ಮನವರ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on

ಸರಗೂರು: ಪಟ್ಟಣದಲ್ಲಿ ನಾಯಕ ಸಮಾಜದ ವತಿಯಿಂದ ಶ್ರೀ ಚಿಕ್ಕದೇವಮ್ಮನವರ ವಾರ್ಷಿಕೋತ್ಸವ ಅಂಗವಾಗಿ ಇತ್ತೀಚೆಗೆ ವಿಶೇಷ ಪೂಜಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಸಲಾಯಿತು.

ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ನಾಯಕ ಸಮಾಜದ ಬೀದಿಗಳನ್ನು ವಿವಿಧ ಬಗೆಯ ತಳಿರು ತೋರಣಗಳಿಂದ ಅಲಂಕರಿಸಿ, ಬೀದಿಗಳಲ್ಲಿ ರಂಗೋಲಿ ಬಿಡಿಸಿ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಚಿಕ್ಕದೇವಮ್ಮನವರ ದೇವಾಲಯದಲ್ಲಿ ಹೋಮ, ಹವನ, ಕಳಸ ಪ್ರತಿಷ್ಠಾಲನೆ, ನವಗ್ರಹದ ಹೋಮ, ದುರ್ಗಹೋಮ ಸೇರಿದಂತೆ ವಿವಿಧ ಹೋಮಗಳು ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ಇದಕ್ಕೂ ಮುನ್ನ ಕಪಿಲ ನದಿಗೆ ತೆರಳಿ ಗಂಗೆ ಪೂಜೆ ಸಲ್ಲಿಸಲಾಯಿತು. ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಪಲ್ಲಕ್ಕಿ ಮೇಲೆ ಅಮ್ಮನವರ ವಿಗ್ರಹ ಕೂರಿಸಿ ಪೂರ್ಣಕುಂಬ ಕಳಸದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಂಗಳವಾದ್ಯ, ಸತ್ತಿಗೆ, ಬ್ಯಾಂಡ್‌ಸೆಟ್, ಚಂಡೆ, ವೀರಗಾಸೆ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.

ಉತ್ಸವಮೂರ್ತಿ ದೇವಾಲಯಕ್ಕೆ ತಲುಪಿದ ನಂತರ ವಿಶೇಷ ಪೂಜೆ ನಡೆಸಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು. ಮೆರವಣೆಗೆಯಲ್ಲಿ ಹೆಣ್ಣು ಮಕ್ಕಳು 101 ಪೂರ್ಣ ಕಳಸ ಹೊತ್ತು ಹರಕೆ ತೀರಿಸಿದರು. ಭಕ್ತಾದಿಗಳು ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ, ಕೋಸುಂಬರಿ ವಿತರಿಸಿದರು. ಸರಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಚಿಕ್ಕದೇವಮ್ಮನವರ ಉತ್ಸವಮೂರ್ತಿ ಕಣ್ತುಂಬಿಕೊಂಡರು. ನಾಯಕ ಸಮಾಜದ ಯಜಮಾನರು, ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net