ಹೆದ್ದಾರಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿ

chikkabelavangala protest
Published on

ಚಿಕ್ಕಬೆಳವಂಗಲ ಸಮೀಪದ ಸ್ಥಳೀಯರ ಪ್ರತಿಭಟನೆ

ಅಧಿಕಾರಿಗಳೊಂದಿಗೆ ಚರ್ಚೆ ಭರವಸೆ ನೀಡಿದ ಜಿಲ್ಲಾಧಿಕಾರಿ


ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ಹೋಬಳಿಯ ಚಿಕ್ಕಬೆಳವಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಸ್ಥಳೀಯರು ಆರಂಭಿಸಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಗ್ರಾಮಸ್ಥರ ಅಹವಾಲು ಆಲಿಸಿದರು.
ದಾಬಸ್‌ಪೇಟೆ-ಹೊಸಕೋಟೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅತಿವೇಗದ ಚಾಲನೆಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಾಣ ಅಗತ್ಯವಾಗಿದೆ ಎಂದು ಪ್ರತಿಭಟನಕಾರರು ಜಿಲ್ಲಾಧಿಕಾರಿ ಗಮನ ಸೆಳೆದರು. ಗ್ರಾಮಗಳ ಪ್ರತಿಶತ ಎಂಬತ್ತರಷ್ಟು ಜಮೀನುಗಳು ರಸ್ತೆಯ ಬಲಬದಿಯಲ್ಲಿವೆ. ಜತೆಗೆ ಪಶು ಆಸ್ಪತ್ರೆಯೂ ಇದೆ. ಆದ್ದರಿಂದ ಚಿಕ್ಕಬೆಳವಂಗಲ ಸಮೀಪ ಹೆದ್ದಾರಿಗೆ ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಅಧಿಕಾರಿಗಳಿಗೆ ತಿಳಿಹೇಳಿ:
ಚಿಕ್ಕಬೆಳವಂಗಲ ಮೂಲಕ ತುಮಕೂರು, ಊರ್ಡಿಗೆರೆ, ಕೋಳಾಲ, ಸಾಸಲು, ಆರೂಢಿ, ಗೊರವನಹಳ್ಳಿ, ಮಧುಗಿರಿಗೆ ಹೋಗಲು ರಸ್ತೆ ದಾಟುವುದು ಕಷ್ಟಕರವಾಗಿದೆ. ಅಂಡರ್ ಪಾಸ್ ನಿರ್ಮಿಸುವುದರಿಂದ ಸುಮಾರು 150 ಗ್ರಾಮಗಳ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಹೇಳಿ ಎಂದು ಗ್ರಾಮಸ್ಥರು ಡಿಸಿ ಅವರಿಗೆ ಮನವಿ ಮಾಡಿದರು.
ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ:
ಚಿಕ್ಕಬೆಳವಂಗಲದಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಒತ್ತಾಯಿಸಿ ಸಾಕಷ್ಟು ಪ್ರತಿಭಟನೆ ನಡೆಸಿದರೂ ಸ್ಥಳೀಯ ಶಾಸಕರು ನಮಗೆ ಬೆಂಬಲ ನೀಡುತ್ತಿಲ್ಲ ಎಂದು ಸ್ಥಳೀಯರು ದೂರಿದರು. ಈ ಹಿಂದೆ ಸಂಸದ ಬಿ.ಎನ್.ಬಚ್ಚೇಗೌಡ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜವಾಗಿಲ್ಲ. ಜನಪ್ರತಿನಿಧಿಗಳು ಕೇವಲ ಕಣ್ಣೊರೆಸುವ ಕೆಲಸಕ್ಕೆ ಸೀಮಿತವಾಗಬಾರದು. ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net