ಚಿಕ್ಕಬಳ್ಳಾಪುರದ ಜನರಿಗಾಗಿ ಹೊಸ ವೆಬ್ ಸೈಟ್ ತೆರೆದ ಶಾಸಕ ಪ್ರದೀಪ್ ಈಶ್ವರ್

3
Published on

ಚಿಕ್ಕಬಳ್ಳಾಪುರ: ಆನ್ ಲೈನ್ ನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಜನರಿಂದ ಅಹವಾಲುಗಳ ಸಲ್ಲಿಕೆಗೆ ಅವಕಾಶ, ಸಂಬಂಧಪಟ್ಟ ತಂಡದಿಂದ ಒಂದು ಗಂಟೆಯೊಳಗೆ ಪರಿಶೀಲನೆ, ವಾಸ್ತವಾಂಶವನ್ನಾಧಾರಿಸಿ ಪ್ರಕರಣಗಳ ಇತ್ಯರ್ಥದ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಶಾಸಕ ಪ್ರದೀಪ್ ಈಶ್ವರ್, ಹೊಸ ವೆಬ್ ಸೈಟ್ (ವೆಬ್‌ಸೈಟ್ ವಿಳಾಸ:www.pradeepishwarmla.com) ಅನಾವರಣಗೊಳಿಸಿದರು.
ಜನರು ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಲು ಅಲೆದಾಡಬಾರದು. ಆಯಾ ವ್ಯಾಪ್ತಿಯಲ್ಲಿಯೇ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಹಾಗೆಯೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ತಲುಪಿ ತ್ವರಿತ ಇತ್ಯರ್ಥವಾಗಬೇಕು. ಇದಕ್ಕಾಗಿ ಇಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ.
ಅಹವಾಲುಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು, ಅರ್ಜಿದಾರರ ಮಾಹಿತಿಯನ್ನು ವೆಬ್ ಸೈಟ್‌ನಲ್ಲಿ ಅಪ್ ಲೌಡ್ ಮಾಡಬೇಕು. ವಾಟ್ಸಾಪ್, ಮೊಬೈಲ್ ಸಂದೇಶದ ಮೂಲಕ ಸಹ ಗಮನಕ್ಕೆ ತರಬಹುದು. ಇದನ್ನು ದೂರು ಸಲ್ಲಿಕೆಯಾದ ಒಂದು ಗಂಟೆಯೊಳಗೆ ಪರಿಶೀಲಿಸಲಾಗುತ್ತದೆ. ಇದರ ವಾಸ್ತವಾಂಶವನ್ನು ದೃಢಪಡಿಸಿಕೊಂಡು, ಆಯಾ ಇಲಾಖೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ.

*100 ಜನರ ತಂಡ ರಚನೆ
ವೆಬ್ ಸೈಟ್ ಅಹವಾಲು ಪರಿಶೀಲನೆಯ ಉಸ್ತುವಾರಿಗಾಗಿಯೇ 100 ಮಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ. ಇದು ದಿನದಲ್ಲಿ ಬ್ಯಾಚ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ದೂರಿಗೆ ಸ್ಪಂದಿಸಿ, ಮಾಹಿತಿ ಸಂಗ್ರಹಿಸಲಿದೆ. ಹಾಗೆಯೇ ಅರ್ಜಿ ಇತ್ಯರ್ಥಪಡಿಸಿದರ ಬಗ್ಗೆ ತಿಳಿಸಲಿದೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರತಿ ಮನೆಯ ಮುಂದೆ ವೆಬ್ ಸೈಟ್ ತೆರೆಯುವ ಸ್ಕ್ಯಾನರ್ ಬಾರ್ಕೊಡ್ ಪೋಸ್ಟರ್ ಹಾಗೂ ವೆಬ್ ಸೈಟ್ ಮಾಹಿತಿಯುಳ್ಳ ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ಜನರಲ್ಲಿ ಸದುಪಯೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಕ್ಷೇತ್ರದಲ್ಲಿ ಶಾಸಕರು ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುವುದಿಲ್ಲ. ಇದಕ್ಕೆ ವೆಬ್ ಸೈಟ್ ಅನ್ನು ರೂಪಿಸಿ, ಜನರನ್ನು ಸಂಪರ್ಕಿಸಲಾಗುತ್ತದೆ. ತ್ವರಿತವಾಗಿ ಅಹವಾಲುಗಳನ್ನು ಬಗೆಹರಿಸಲಾಗುತ್ತದೆ. ಒಂದು ವೇಳೆ ದೂರು ನಿಯಮಾನುಸಾರ ಇಲ್ಲದಿದ್ದ ಹಂತದಲ್ಲಿ ಸಂಬಂಧಪಟ್ಟವರಿಗೆ ತಿಳಿಸಲಾಗುತ್ತದೆ. ಅಂಗೀಕಾರ ಮತ್ತು ತಿರಸ್ಕೃತ ನಿರ್ಧಾರದ ಬಳಿಕವಷ್ಟೇ ಅರ್ಜಿ ಇತ್ಯರ್ಥವಾಗಿದೆ ಎಂಬುದಾಗಿ ಪರಿಗಣಿಸಲಾಗುತ್ತದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

((ವೆಬ್‌ಸೈಟ್ ವಿಳಾಸ: www.pradeepishwarmla.com))

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net