ನಿಲ್ಲದ ಶಾಸಕ-ನಗರಸಭಾ ಸದಸ್ಯರ ನಡುವಿನ ತಿಕ್ಕಾಟ

0000111111111111
Published on

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ನಗರಿಯನ್ನು ಪರಸ್ಪರ ಸಮ್ವಯತೆಯಿಂದ ಮಾದರಿಯಾಗಿ ಅಭಿವೃದ್ಧಿಪಡಿಸಬೇಕಾಗಿರುವ ಜವಾಬ್ದಾರಿ ಹೊತ್ತಿರುವ ಶಾಸಕರು ಮತ್ತು ನಗರಸಭಾ ಸದಸ್ಯರ ನಡುವಿನ ತಿಕ್ಕಾಟವು ಮುಗಿಯುವ ಲಕ್ಷಣಗಳು ಗೋಚರವಾಗುತ್ತಿಲ್ಲ.

ಹೌದು! ಜನಪರ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಟೀಕೆ, ಆರೋಪ ಪ್ರತ್ಯಾರೋಪ, ಸವಾಲು ಮತ್ತು ಪ್ರತಿ ಸವಾಲುಗಳು ಜೋರಾಗಿವೆ. ನಗರಸಭೆಯ ಆಡಳಿತ, ಸದಸ್ಯರ ಕಾರ್ಯ ವೈಖರಿಯ ಬಗ್ಗೆ ಟೀಕೆ, ಹಸ್ತಕ್ಷೇಪದ ಬಗೆಗಿನ ದೂರುಗಳೇ ಅಭಿವೃದ್ಧಿ ಕೆಲಸಗಳಿಗಿಂತಲೂ ಹೆಚ್ಚಿಗೆ ಸದ್ದು ಮಾಡುತ್ತಿವೆ.

ಇಲ್ಲಿನ ನಗರಸಭೆಯಲ್ಲಿ 31 ಸದಸ್ಯರಿದ್ದಾರೆ. ಈ ಪೈಕಿ 16 ಮಂದಿ ಕಾಂಗ್ರೆಸ್ ಸದಸ್ಯರೇ ಸ್ವಲಾಭ ಮತ್ತು ಅಧಿಕಾರದ ಲೆಕ್ಕಾಚಾರದಲ್ಲಿ ಹೊಡೆದು ಭಿನ್ನ ಗುಂಪುಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ನಡುವೆ ಭ್ರಷ್ಟಾಚಾರ, ದುರಾಡಳಿಕ್ಕೆ ಹೆಸರುವಾಸಿಯಾಗಿರುವ ನಗರಸಭೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇದು ಮೊದಲಿನಿಂದಲೂ ಭ್ರಷ್ಟರಿಂದ ತುಂಬಿ ತುಳುಕಾಡುತ್ತಿದೆ ಎಂಬುದಾಗಿ ಶಾಸಕರು ಹೇಳಿರುವುದು ಸದಸ್ಯರ ಕೋಪಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ ದಾಖಲೆ ಸಮೇತ ಅವ್ಯವಹಾರವನ್ನು ನಿರೂಪಿಸಲು ಸವಾಲು ಹಾಕಲಾಗುತ್ತಿದೆ.

* ನಗರ ಸಂಚಾರದ ಕಿಡಿ

ಶಾಸಕರಾಗಿ ಪ್ರದೀಪ್ ಈಶ್ವರ್ ಆಯ್ಕೆಯಾಗುತ್ತಿದ್ದಂತೆ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಡಿ ಖುದ್ದಾಗಿ ಮನೆ ಮನೆಗೂ ತೆರಳಿ, ಜನರ ಅಹವಾಲು ಆಲಿಸುತ್ತಿದ್ದಾರೆ. ಇದೇ ವೇಳೆ ನಗರ ಪ್ರದೇಶದಲ್ಲಿ ಸಂಚಾರದ ಪ್ರತಿ ಸಂದರ್ಭದಲ್ಲೂ ನಗರಸಭೆಯ ಬಗೆಗಿನ ಟೀಕೆಯು ಗಲಾಟೆಗೆ ಕಾರಣವಾಗಿದೆ.

ನಗರಸಭೆಯ ಇ ಖಾತೆ ಸೇರಿದಂತೆ ಹಲವು ದಾಖಲೆಗಳು, ಸವಲತ್ತುಗಳನ್ನು ಸದಸ್ಯರ ಸಹಭಾಗಿತ್ವವಿಲ್ಲದೇ ನೇರವಾಗಿ ತಲುಪಿಸುವ ಮೂಲಕ ಆಡಳಿತದಲ್ಲಿನ ಹಸ್ತಕ್ಷೇಪ ಮಾಡಲಾಗುತ್ತಿದೆ. ಜತೆಗೆ ಯಾವುದೇ ದಾಖಲೆಗಳನ್ನು ಹೊಂದಿರದಿದ್ದರೂ ಸದಸ್ಯರ ಭ್ರಷ್ಟಾಚಾರ ಬಗ್ಗೆ ಟೀಕಿಸುವ ಮೂಲಕ ಜನರಲ್ಲಿ ತಪ್ಪು ಭಾವನೆ ಮೂಡಿಸಲಾಗುತ್ತಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಎರಡ್ಮೂರು ಸುದ್ದಿಗೋಷ್ಠಿ, ಪ್ರಚಾರ ಕಾರ್ಯಕ್ರಮಗಳಲ್ಲಿ ಆರೋಪಕ್ಕೆ ಸಂಬಂಧಿಸಿದ ದಾಖಲೆಯನ್ನು ಬಹಿರಂಗಪಡಿಸಲು ಒತ್ತಾಯಿಸಲಾಗಿದೆ.

ಬಾಕ್ಸ್

ಮಾಜಿ ಅಧ್ಯಕ್ಷರು ಗರಂ

ನನ್ನನ್ನು ನಿಂದಿಸುತ್ತಿರುವ ನಗರಸಭಾ ಸದಸ್ಯರು ಮುಂಬರುವ ಚುನಾವಣೆಯಲ್ಲಿ ಗೆಲುವುದಿಲ್ಲ. ಬದಲಿಗೆ ಠೇವಣಿ ಕಳೆದುಕೊಳ್ಳುತ್ತಾರೆ ಎಂಬ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಯು ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣೆಯಲ್ಲಿ ವಿರುದ್ಧ ಪ್ರಚಾರ ನಡೆಸುವುದಿರಲಿ, ಅವರೇ ನನ್ನ ವಿರುದ್ಧ ಗೆದ್ದು ತೋರಿಸಲಿ ಎಂದು ಶಾಸಕರಿಗೆ ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಸೇರಿದಂತೆ ಹಲವು ಸದಸ್ಯರು ಪ್ರತಿ ಸವಾಲು ಹಾಕಿದ್ದಾರೆ. ಮುಂದಿನ ನಗರಸಭೆ ಚುನಾವಣೆವರೆಗೂ ಕಾಯುವುದು ಬೇಡ. ನಾಳೆಯೇ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಶಾಸಕರು ನನ್ನ ವಿರುದ್ಧ ಸ್ಪರ್ಧಿಸಲಿ, ಇಲ್ಲಿನ 31 ವಾರ್ಡ್ ಗಳ ಪೈಕಿ ಅವರು ಸೂಚಿಸುವ ಯಾವ ವಾರ್ಡ್ ನಲ್ಲಾದರೂ ಪಕ್ಷೇತರನಾಗಿ ಸ್ಪರ್ಧಿಸಿ, ಆಗ ಯಾರು ಠೇವಣಿ ಕಳೆದುಕೊಳ್ಳುತ್ತಾರೆ ನೋಡೋಣ ಎಂದು ಗುಡುಗಿದ್ದಾರೆ.

* ಸ್ವಪಕ್ಷೀಯರ ಭಿನ್ನರಾಗ

ಇತ್ತೀಚೆಗೆ ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಬಣಗಳನ್ನು ಒಗ್ಗೂಡಿಸಿ, ಆಡಳಿತವನ್ನು ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಸಭೆಯನ್ನು ಕರೆದು ಚರ್ಚಿಸಿದ್ದು ಇಲ್ಲೂ ಸಹ ಶಾಸಕರು, ಸ್ವಪಕ್ಷೀಯ ನಗರಸಭಾ ಸದಸ್ಯರು ಪರಸ್ಪರ ಭಿನ್ನರಾಗ ತೆಗೆದು, ಟೀಕಿಸಿಕೊಂಡಿದ್ದಾರೆ. ಇದೇ ವೇಳೆ ಮಾತಿನ ಚಕಮಕಿಯಲ್ಲಿ ತೊಡಗಿದ್ದವರನ್ನು ಸಮಾಧಾನಪಡಿಸುವಲ್ಲಿ ಸಚಿವರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹೈರಾಣರಾಗಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದಭದಲ್ಲಿ ಪಕ್ಷದ್ರೋಹಿ ಚಟುವಟಿಕೆ ನಡೆಸಿದ ಸದಸ್ಯರು ಅಗತ್ಯವಿಲ್ಲ ಎಂಬುದಾಗಿ ಶಾಸಕರು ವಾದಿಸಿದರೆ, ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದ ನಾಯಕರ ಮಾತನ್ನು ಬಿಟ್ಟು ಇನ್ನು ಬೇರೆಯವರ ಮಾತು ಕೇಳುವುದಿಲ್ಲ ಎಂದು ಸದಸ್ಯರು ಗುಡುಗಿದ್ದಾರೆ.

*ಅಭಿವೃದ್ಧಿ ಕೆಲಸ ಮತ್ತು ಪ್ರಾಮಾಣಿಕ ಸ್ಪಂದನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರು ನನ್ನನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಜನರ ಸಂಕಷ್ಟಗಳಿಗೆ ನೆರವಾಗಿ, ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ. ಇತರೆ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೇ ಟೀಕಿಸಿದರೂ ಮನೆ ಮನೆಗೂ ಹೋಗಿ, ಜನರ ಅಹವಾಲು ಆಲಿಸಲಾಗುವುದು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು.

ಪ್ರದೀಪ್ ಈಶ್ವರ್, ಶಾಸಕ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net