ನೀರಿನ ಹಾಹಾಕಾರ ದೂರ: ಮಳೆಗೆ ಜಿಲ್ಲೆಯ ಜಲಾಶಯ, ಕೆರೆ ಕುಂಟೆಗಳು ಭರ್ತಿ

1
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚೆಗೆ ಉತ್ತಮವಾಗಿ ಸುರಿಯುತ್ತಿರುವ ಮಳೆಗೆ ಜಲಾಶಯ, ಕೆರೆ ಕುಂಟೆಗಳಿಗೆ ಹೆಚ್ಚಿನ ನೀರಿನ ಸಂಗ್ರಹವಾಗಿದ್ದು ಹಾಹಾಕಾರದ ಆತಂಕ ದೂರವಾಗಿದೆ.


ಕಳೆದ ಸಾಲಿನ ಹಿಂಗಾರು ಅವಧಿಯ ಸಂದರ್ಭದಲ್ಲಿ ಉತ್ತಮ ಮಳೆಯ ಜತೆಗೆ ಪ್ರಸ್ತುತ ಮುಂಗಾರಿನಲ್ಲಿ ವರುಣರಾಯನ ಕೃಪೆ ಜಿಲ್ಲೆಯ ಮೇಲೆ ಕರುಣಿಸಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ಕೊಳವೆ ಬಾವಿಗಳ ವೈಫಲ್ಯ, ಬತ್ತಿ ಹೋಗುವಿಕೆ ದೂರವಾಗಿದೆ. ಮತ್ತೊಂದೆಡೆ ಕುಡಿಯುವ ನೀರಿನ ಪ್ರಮುಖ ಮೂಲಗಾದ ಜಲಾಶಯಗಳು, ಕೆರೆಗಳಲ್ಲಿ ಸಮೃದ್ಧಿಯಾಗಿ ಇರುವ ನೀರನ್ನು ಸಮರ್ಪಕವಾಗಿ ಪೂರೈಸುವುದರಿಂದ ಹಾಹಾಕಾರವು ದೂರವಾಗಿದೆ. ಪ್ರಸ್ತುತ ಮುಂಬರುವ ಮೂನಾಲ್ಕು ತಿಂಗಳು ಜಿಲ್ಲೆಯಲ್ಲಿನ ನಗರ, ಪಟ್ಟಣ ಪ್ರದೇಶಗಳಲ್ಲಿ ಅಭಾವದ ಸಮಸ್ಯೆ ತಲೆ ಧೋರುವುದಿಲ್ಲ ಎಂಬ ಮಾತು ಕೇಳಿ ಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಉತ್ತಮ ಮಳೆಯ ನಡುವೆಯೂ ಬೇಸಿಗೆಯಲ್ಲಿ ಜಿಲ್ಲೆಯ 150ಕ್ಕೂ ಹೆಚ್ಚು ಗ್ರಾಮಗಳು ಹಾಹಾಕಾರ ಪಟ್ಟಿಯಲ್ಲಿದ್ದವು. ಕೊಳವೆ ಬಾವಿ ವೈಫಲ್ಯವು ದೊಡ್ಡ ತಲೆ ನೋವಾಗಿ ಪರಿಣಿಮಿಸಿ, ಖಾಸಗಿ ಟ್ಯಾಂಕರ್ ಮತ್ತು ಕೊಳವೆ ಬಾವಿಯ ಮೂಲಕ ನೀರನ್ನು ಪೂರೈಸಬೇಕಾಗಿತ್ತು. ಆದರೆ, ಈ ಬಾರಿ ಅಭಾವದ ಸಮಸ್ಯೆ ಇಲ್ಲ. ಹಿಂದೆ ಬತ್ತಿ ಹೋಗಿ ಖಾಲಿ ಮೈದಾನದಂತೆ ಗೋಚರಿಸುತ್ತಿದ್ದ ನಗರದ ಕಂದವಾರ ಕೆರೆಗೆ ಎಚ್.ಎನ್.ವ್ಯಾಲಿ ಯೋಜನೆ ಮತ್ತು ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಜಕ್ಕಲಮಡಗು ಜಲಾಶಯದಿಂದ ಒಂದು ವರ್ಷಕ್ಕೆ ನೀರು ಪೂರೈಸಬಹುದು. ಇನ್ನು ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆ, ಬಾಗೇಪಲ್ಲಿಯ ಚಿತ್ರಾವತಿ ಜಲಾಶಯವು ಕೋಡಿ ಹರಿದಿದೆ. ಚಿಂತಾಮಣಿ ಕನ್ನಂಪಲ್ಲಿ ಕೆರೆಯಲ್ಲೂ ಸಮೃದ್ಧಿ ನೀರಿದೆ. ಮತ್ತೊಂದೆಡೆ ಗೌರಿಬಿದನೂರಿನಲ್ಲಿ ಉತ್ತರಪಿನಾಕಿನಿ ನದಿಯು ಹರಿಯುತ್ತಿದೆ. ಇನ್ನೂ ಬಹುತೇಕ ಚೆಕ್ ಡ್ಯಾಂಗಳು ತುಂಬಿ ತುಳುಕಾಡುತ್ತಿವೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆಯಾಗುವುದರಿಂದ ಕೆರೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಳವಾಗಲಿದೆ.

ಕುಡಿಯುವ ನೀರಿನ ಮೂಲ: ನದಿ-ನಾಲೆಗಳಿಲ್ಲದ ಜಿಲ್ಲೆಯಲ್ಲಿ ಕೆರೆಗಳೇ ಜೀವಾಳ. ಈ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 201 ಕೆರೆಗಳು ಮತ್ತು ಜಿಪಂ ವ್ಯಾಪ್ತಿಗೆ ಸೇರಿದ 1,402 ಕೆರೆಗಳು ಸೇರಿ 1,603 ಕೆರೆಗಳಿವೆ. ಇದರ ನಡುವೆ ಸ್ಥಳೀಯ ಆಡಳಿತ ಸಂಸ್ಥೆಗಳು ಕುಡಿಯುವ ನೀರಿನ ಯೋಜನೆಗೆ ಅಳವಡಿಕೆಯ ಕೆರೆ ಮತ್ತು ಜಲಾಶಯಗಳನ್ನು ನಿರ್ವಹಿಸುತ್ತಿದೆ. ಇವುಗಳಿಗೆ ಸಂಬಂಧಿಸಿದಂತೆ ಬಹುತೇಕ ಎಲ್ಲಾದರಲ್ಲೂ ಸಮೃದ್ಧಿ ನೀರಿನಿಂದ ಜೀವ ಕಳೆ ಬಂದಿದೆ. ಜಿಲ್ಲೆಯಲ್ಲಿ 2011ರ ಜನಗಣತಿಯಂತೆ ಕುಟುಂಬಗಳ ಸಂಖ್ಯೆ 2,84,698. ಇದರಲ್ಲಿ ಕೊಳಾಯಿ ಶೇ.71.46, ಬಾವಿ ಶೇ.1.38, ಕೈ ಪಂಪು ಶೇ.1.08 ಮತ್ತು ಕೊಳವೆ ಬಾವಿ ಶೇ.23.95 ರಷ್ಟು ಕುಡಿಯುವ ನೀರಿನ ಮೂಲವನ್ನು ಆವಲಂಬಿಸಲಾಗಿದೆ. ಇನ್ನು ಜಲಜೀವನ್ ಮಿಷನ್ ಯೋಜನೆಯಡಿ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು, ಮಂಚೇನಹಳ್ಳಿಯ ದಂಡಿಗಾನಹಳ್ಳಿ ಕೆರೆಯಿಂದ ನೀರು ಪೂರೈಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಸಂರಕ್ಷಣೆಗೆ ಮತ್ತಷ್ಟು ಆದ್ಯತೆ: ಎಚ್.ಎನ್ ವ್ಯಾಲಿ ಯೋಜನೆಯ ಮೂಲಕ ಜಿಲ್ಲೆಯ 44 ಕೆರೆಗಳನ್ನು ತುಂಬಿಸಲಾಗಿದೆ. ಇನ್ನು ಬಯಲು ಸೀಮೆಗೆ ನೀರುಣಿಸುವ ಎತ್ತಿನಹೊಳೆ ಯೋಜನೆಯೂ ಪ್ರಗತಿಯಲ್ಲಿದ್ದು, ಕೃಷ್ಣಾ ನದಿ ನೀರನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಕರ್ನಾಟಕದ ಗಡಿ ಜಿಲ್ಲೆಗಳಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಇದರಡಿ ಜಿಲ್ಲೆಗೂ ನೀರು ಪೂರೈಕೆೆಯಾಗುವ ನಿರೀಕ್ಷೆ ಇದೆ. ಇನ್ನು ಬೃಹತ್ ಯೋಜನೆಗಳ ನಡುವೆ ಈ ಭಾಗದ ಕೆರೆಗಳು, ರಾಜಕಾಲುವೆಗಳ ಸಂರಕ್ಷಣೆಗೆ ಮತ್ತಷ್ಟು ಆದ್ಯತೆ ನೀಡುವುದರಿಂದ ಈ ಭಾಗದಲ್ಲಿ ಹಾಹಾಕಾರ ಸಮಸ್ಯೆ ದೂರವಾಗುತ್ತದೆ.


ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಂತರ್ಜಲ ಮಟ್ಟ ವೃದ್ಧಿ, ಕೆರೆ, ಜಲಾಶಯಗಳಲ್ಲಿ ಸಮೃದ್ಧಿ ನೀರು ಕಂಡು ಬರುತ್ತಿದೆ. ಇದು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ.
| ಮಂಜುನಾಥ್ ರೈತ ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net