ಟೆಂಟ್‌ನಲ್ಲಿ ಸಿದ್ಧನಾಗುತ್ತಿದ್ದಾನೆ ಗಣಪ: ಕೋಲ್ಕತದ ಕಲಾವಿದರ ತಂಡದಿಂದ ಮೂರ್ತಿಗಳ ತಯಾರು

1
ಚಿಕ್ಕಬಳ್ಳಾಪುರ ನಗರದ ಹೊರವಲಯದ ಅಗಲಗುರ್ಕಿ ರೈಲ್ವೆ ಗೇಟ್ ಬಳಿ ಭತ್ತದ ಹೊಟ್ಟು, ಹುಲ್ಲು ಬಳಸಿ ಬೆನಕನಿಗೆ ರೂಪ ಕೂಡುತ್ತಿರುವ ಕಲಾವಿದರು.
Published on

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ
ಕರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ಧ ಕೋಲ್ಕತದ ಕಲಾವಿದರ ತಂಡವು ಪ್ರತಿ ವರ್ಷದಂತೆ ಗಣೇಶ ಚತುರ್ಥಿ ಹಬ್ಬಕ್ಕಾಗಿ ನಗರದ ಅಗಲಗುರ್ಕಿ ರೈಲ್ವೆ ಗೇಟ್ ಬಳಿ ನಾನಾ ಆಕಾರದ ಗಣಪನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿವೆ.


ಶಂಖ ಗಣಪ, ಕೃಷ್ಣ ಗಣಪ ದರ್ಬಾರ್, ಸಿಂಹಾರೂಢ, ಗಜವಾಹನ, ಆಂಜನೇಯ, ನಾಗರಹಾವು, ಮಯೂರ ವಾಹನ, ಕಮಲಾರೂಢ, ನೃತ್ಯಪಟು, ವೀಣಾ, ಲಾಲಾ ಬಾಗ್ ಕಾ ರಾಜ, ಹಸು, ಮರದ ಕೊಂಬೆಯ ಮೇಲೆ ಕುಳಿತ ಗಣಪ, ಎಲೆ ಮೇಲೆ ಕುಳಿತಿರುವ ಗಣಪ ಸೇರಿದಂತೆ 80ಕ್ಕೂ ಅಧಿಕ ಬಗೆಯ ಭಂಗಿಗಳಲ್ಲಿ ಕುಳಿತಿರುವ ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಮೊದಲ ಹಂತದ ಕೆಲಸ ಮುಗಿದಿದೆ. ಇನ್ನೂ ಆಕರ್ಷಕ ರೂಪಕ್ಕೆ ಸ್ಪರ್ಶ ಕೊಡುವ ಇತರ ಕೆಲಸಗಳು ನಡೆಯುತ್ತಿವೆ.

ಪ್ರತಿ ವರ್ಷ ಕೋಲ್ಕತದ ತಂಡವು ಗಣೇಶ ಚತುರ್ಥಿ ಎರಡು ತಿಂಗಳಿರುವಾಗಲೇ ಆಗಮಿಸಿ ಗಣಪನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಅದರಂತೆ ಈ ಬಾರಿ 6 ಕಲಾವಿದರನ್ನೊಳಗೊಂಡ ತಂಡವು ಟೆಂಟ್‌ನಲ್ಲಿ ಅಗತ್ಯ ಕೆಲಸದಲ್ಲಿ ತೊಡಗಿದೆ. 3ರಿಂದ 12 ಅಡಿವರೆಗೆ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಗಾತ್ರದ ವಿಶೇಷತೆ ಆಧಾರದ ಮೇಲೆ ಬೆಲೆ ನಿಗದಿಪಡಿಸಲಾಗುತ್ತದೆ.


ದುಬಾರಿ ವೆಚ್ಚ, ಕಡಿಮೆ ಲಾಭ: ವಿಗ್ರಹ ತಯಾರಿಕೆಗೆ ಅಗತ್ಯವಿರುವಷ್ಟು ಜೇಡಿ ಮಣ್ಣು, ನೀರು, ಬಿದಿರನ್ನು ಸ್ಥಳೀಯವಾಗಿ ಖರೀದಿಸಿದ್ದು, ಇನ್ನೂ ತಿಳಿಯಾದ ಮಣ್ಣು ಮತ್ತು ಬಣ್ಣಗಳನ್ನು ಕೋಲ್ಕತದಿಂದ ತರಲಾಗಿದೆ. ಪರಿಕರಗಳ ಖರೀದಿ, ಕೂಲಿ ಕೆಲಸ, ತಿಂಗಳಾನುಗಟ್ಟಲೆ ಮೂರ್ತಿ ತಯಾರು, ರಕ್ಷಣೆ ಮತ್ತು ನಿರ್ವಹಣೆ ಸೇರಿ ಇತರ ಕೆಲಸಗಳಿಗೆ ದುಬಾರಿ ವೆಚ್ಚ ತಗುಲುತ್ತದೆ. ಆಗಾಗ ಮೂರ್ತಿಗಳು ಭಗ್ನಗೊಂಡು ನಷ್ಟವಾಗುತ್ತದೆ. ಇದರ ನಡುವೆ ಮೂರ್ತಿ ತಯಾರಕರ ನಡುವಿನ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ ಎನ್ನುವುದು ಕಲಾವಿದರ ಮಾತು.

ಬುಕ್ಕಿಂಗ್ ನಿರೀಕ್ಷೆ: ಕರೊನಾ ಹಿನ್ನೆಲೆಯಲ್ಲಿ ನಾನಾ ನಿರ್ಬಂಧಗಳಿಂದಾಗಿ ಗಣಪತಿ ಹಬ್ಬದ ಸಂಭ್ರಮವು ಎರಡು ವರ್ಷ ಮಂಕಾಗಿತ್ತು. ಮೂರ್ತಿಗಳ ಖರೀದಿಗೆ ಹೆಚ್ಚಿನ ಬೇಡಿಕೆ ಇಲ್ಲದೆ ನಷ್ಟ ಅನುಭವಿಸಬೇಕಾಯಿತು. ಇದೀಗ ಅಡ್ಡಿ ಆತಂಕ ದೂರವಾಗಿವೆ. ಈ ಬಾರಿ ಒಳ್ಳೆಯ ವ್ಯಾಪಾರದ ಆಶಾಭಾವನೆ ಮೂಡಿದೆ. ಸಾಮಾನ್ಯವಾಗಿ ಗಣೇಶ ಚತುರ್ಥಿಗೆ ಆಕರ್ಷಕ ಮೂರ್ತಿ ಪ್ರತಿಷ್ಠಾಪಿಸಿ, ಗಮನ ಸೆಳೆಯುವಲ್ಲಿ ಯುವಕರ ನಡುವೆ ಪೈಪೋಟಿ ಹೆಚ್ಚಾಗುವುದರಿಂದ ಹಲವರು ಮೊದಲೇ ಬಂದು ಬುಕ್ಕಿಂಗ್ ಮಾಡುವ ನಿರೀಕ್ಷೆ ಇದೆ. ಆ.31ರಂದು ಗಣೇಶ ಚತುರ್ಥಿ. ಇದರಿಂದ ಈ ತಿಂಗಳ ಮೊದಲ ವಾರದಿಂದಲೇ ಬುಕ್ಕಿಂಗ್ ಪ್ರಾರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಕಲಾವಿದರಿದ್ದಾರೆ.

ಪರಿಸರಸ್ನೇಹಿ ಗಣಪ: ಪರಿಸರಕ್ಕೆ ಮಾರಕವಾದ ರಾಸಾಯನಿಕಗಳಿಂದ ತಯಾರಿಸಲಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಬಳಕೆ ನಿಷೇಧಿಸಲಾಗಿರುವುದರಿಂದ ಪರಿಸರಸ್ನೇಹಿ ಗಣಪ ಮೂರ್ತಿಗಳ ತಯಾರಿಕೆಗೆ ಆದ್ಯತೆ ನೀಡಲಾಗಿದೆ.


ಮೂರ್ತಿ ತಯಾರಿಕೆ ಹೊಟ್ಟೆ ಪಾಡಿನ ಕೆಲಸ. ಇದನ್ನು 20 ವರ್ಷಗಳಿಂದಲೂ ನಿರ್ವಹಿಸಲಾಗುತ್ತಿದೆ. ಊರು ಬಿಟ್ಟು ಬಂದು, ಇಲ್ಲಿ ಟೆಂಟ್‌ನಲ್ಲಿ ನೆಲೆಸಿ ವಿಗ್ರಹಗಳನ್ನು ತಯಾರಿಸಲಾಗುತ್ತದೆ. ಕಳೆದ 2 ವರ್ಷ ಕರೊನಾ ಹಿನ್ನೆಲೆಯಲ್ಲಿ ಬರಲಾಗಲಿಲ್ಲ. ಸಾಲದ ಹಣದಲ್ಲಿ ಬಂಡವಾಳ ಹೂಡಲಾಗಿದೆ. ಒಳ್ಳೆಯ ವ್ಯಾಪಾರವಾದರೆ ಅನುಕೂಲವಾಗುತ್ತದೆ.
| ಲಕ್ಷ್ಮೀಕಾಂತ್ ಮೂರ್ತಿ ತಯಾರಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net