ಜಿಲ್ಲಾ ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧ

ಎನ್​.ಎಸ್​.ಪಂಡಿತ್​ ಜವಾಹರ್​
ಎನ್​.ಎಸ್​.ಪಂಡಿತ್​ ಜವಾಹರ್​
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ
  • ಪಿಪಿಪಿ ಮಾಡೆಲ್​ ಕೈಬಿಡಲು ಸಿಎಂಗೆ ಮನವಿ
  • ಶತಮಾನದ ಹೊಸ್ತಿಲಿನ ಆಸ್ಪತ್ರೆ
ತುಮಕೂರು: ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜಿಲ್ಲಾ ಆಸ್ಪತ್ರೆ 1931 ರಲ್ಲಿ ಬ್ರೀಟಿಷರ ಆಡಳಿತದಲ್ಲಿ ಪ್ರಾರಂಭವಾಗಿದ್ದು ಇನ್ನೇನು ನೂರು ವರ್ಷಕ್ಕೆ ಹತ್ತಿರ ಬರುತ್ತಿದೆ. ಅಂದಿನಿಂದ ಇಂದಿನವರೆಗೆ ಈ ದೀರ್ಘ ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಯಾಗಿ ಉಳಿದು ರೋಗಿಗಳಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಹಾಗಾಗಿ, ಪಿಪಿಪಿ ಮಾದರಿಯಡಿ ಈ ಆಸ್ಪತ್ರೆಯನ್ನು ಖಾಸಗೀಕರಣ ಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಸಾರ್ವಜನಿಕರಿಗೆ ಬರಸಿಡಿಲು ಬಡಿದಂತೆ ಆಗಿದೆ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎನ್​.ಎಸ್​.ಪಂಡಿತ್​ ಜವಾಹರ್​ ಮನವಿ ಮಾಡಿದ್ದಾರೆ.
ಶೇ.70 ರಷ್ಟು ಆರ್ಥಿಕವಾಗಿ ದುರ್ಬಲರಾಗಿರುವ ಸಾರ್ವಜನಿಕರು ಈ ಸರ್ಕಾರಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಮತ್ತು ಈ ಸರ್ಕಾರಿ ಆಸ್ಪತ್ರೆ ಮೇಲೆ ಅವಲಂಬಿತರಾಗಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ಈಗ ಖಾಸಗೀಕರಣ ಸರಿಯಾದ ನಡೆಯಲ್ಲ. ಆರ್ಥಿಕವಾಗಿ ದುರ್ಬಲರ, ಬಡವರ, ಕೆಳ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಲೆಂದು ಎಷ್ಟೇ ವಿರೋಧವಿದ್ದರೂ ವರ್ಷಕ್ಕೆ 50 ಸಾವಿರ ಕೋಟಿ ಹಣ ಮೀಸಲಿಟ್ಟು ಭಾಗ್ಯಗಳನ್ನು ಜಾರಿಗೆ ತಂದಿರುವ ಸಮಾಜವಾದಿಯಾಗಿ ತಮ್ಮ ಸರ್ಕಾರಕ್ಕೆ ತುಮಕೂರು ಜನರಲ್​ ಆಸ್ಪತ್ರೆ ಒಂದು ಭಾರವೆ? ಈ ಸರ್ಕಾರಕ್ಕೆ ಅಷ್ಟೊಂದು ಬಡತನವೇ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಈ ಸರ್ಕಾರಿ ಆಸ್ಪತ್ರೆ ಮೇಲೆ ಅವಲಂಬತರಾಗಿರುವ ಶೇ.70ರಷ್ಟು ಜನರು ನಿಮ್ಮ ಪಕ್ಷದ ಮತದಾರರಾಗಿದ್ದು ಒಂದು ವೇಳೆ ಈ ಆಸ್ಪತ್ರೆ ಖಾಸಗೀಕರಣಗೊಂಡರೆ ಈ ಜನರು ನಿಮ್ಮ ಪಕ್ಷದಿಂದ ದೂರ ಹೋಗುತ್ತಾರೆ. ಇವೆಲ್ಲವನ್ನೂ ಗಮನಿಸಿ, ನಿಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಪಂಡಿತ್​ ಜವಾಹರ್​ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net