ಕಮ್ಮಿ ಹಣಕ್ಕೆ ಚಿನ್ನ ಖರೀದಿ ವೇಳೆ ಮೋಸ ಹೋಗಿ ಕಳ್ಳತನದ ಕತೆ ಹೇಳಿದ್ರು

ಚಿನ್ನಾಭರಣ
ಚಿನ್ನಾಭರಣ
Published on
ಚಿಕ್ಕಬಳ್ಳಾಪುರ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ೬.೫೦ ಲಕ್ಷ ರೂಗಳನ್ನು ಕಳ್ಳರು ಕಸಿದುಕೊಂಡು ಹೋಗಿದ್ದ ಪ್ರಕರಣದ ತನಿಖೆಯಲ್ಲಿ ನಕಲಿ ಚಿನ್ನ ಮಾರಾಟದ ವಂಚನೆಯ ವ್ಯವಹಾರವು ಬೆಳಕಿಗೆ ಬಂದಿದೆ.
ಮೊದಲು ಹಣ ಕಳೆದುಕೊಂಡಿದ್ದ ಆಂಧ್ರದ ತಿರುಪತಿ ಮೂಲದ ಕುಟುಂಬವು ಕಳ್ಳತನದ ಅಳಲು ತೋಡಿಕೊಂಡಿತ್ತು. ಆದರೆ, ಕಡಿಮೆ ದರಕ್ಕೆ ಚಿನ್ನವನ್ನು ಖರೀದಿಸುವ ಸಲುವಾಗಿ ಕಳ್ಳರೊಂದಿಗೆ ಮೊದಲೇ ವ್ಯವಹಾರದ ಮಾತುಕತೆ ನಡೆಸಿಕೊಂಡು ಬಂದಿದ್ದು ನಕಲಿ ಚಿನ್ನ ಕೈ ಸೇರುತ್ತಿದ್ದಂತೆ ವಂಚನೆಗೊಳಗಾಗಿರುವುದನ್ನು ಅರಿತುಕೊಂಡು ಕಳ್ಳತನವಾಗಿರುವ ನಾಟಕವಾಡಿದೆ.
ನಕಲಿ ಚಿನ್ನ ಕೊಟ್ಟು ಹಣ ಪಡೆದುಕೊಂಡು ಹೋದ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚೇಳೂರು ತಾಲೂಕಿನ ಪೆಮ್ಮಗಾರಪಲ್ಲಿಯ ಗೋಪಾಲ್, ಸಂಜೀವ್ ಕುಮಾರ್ ಹಾಗೂ ಕೋರ್ಲಪರ್ತಿಯ ರಮೇಶ್ ಬಂಧಿತರು.‌ ಆರೋಪಿಗಳಿಂದ ಕಳ್ಳತನದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಮೂವರು ಮೊದಲಿನಿಂದಲೂ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಭಾಗವಹಿಸಿದ್ದು ಅಮಾಯಕರಿಗೆ ಲಾಭದ ಆಸೆಯನ್ನು ತೋರಿಸಿ ಹಣವನ್ನು ಪಡೆದುಕೊಂಡು ವಂಚಿಸುತ್ತಿದ್ದರು. ಇವರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಕಡಿಮೆ ದರಕ್ಕೆ ಚಿನ್ನವನ್ನು ಖರೀದಿಸಿ ಲಾಭವನ್ನು ಗಳಿಸುವ ಉದ್ದೇಶದೊಂದಿಗೆ
ಆಂಧ್ರದ ತಿರುಪತಿ ಮೂಲದ ಉಷಾ ರಮೇಶ್ ಎಂಬುವವರು ಕುಟುಂಬದ ಸದಸ್ಯರೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿಗೆ ಬಂದಿದ್ದರು. ಆದರೆ, ಮದುವೆಗಾಗಿ ತಂದಿದ್ದ ಹಣ, ಅಪರಿಚಿತರು ಕಿತ್ತುಕೊಂಡು ಹೋಗಿದ್ದಾರೆ ಎಂಬುದಾಗಿ ಮೊದಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಹೋದರಿಯ ಮಗಳ ಮದುವೆಗೆ ಹಣವನ್ನು ಕೊಡಲು ಬೆಂಗಳೂರಿಗೆ ಕಾರಿನಲ್ಲಿ ತೆರಳಲಾಗುತ್ತಿತ್ತು. ಒಡವೆ ಅಡ ಇಟ್ಟಿರುವುದರ ಜತೆಗೆ ಎಲ್ ಐಸಿ ವಿಮೆಯಿಂದ ೬.೫೦ ಲಕ್ಷ ರೂ ಸಂಗ್ರಹಿಸಲಾಗಿತ್ತು. ಇದೇ ವೇಳೆ ಊಟ ಮಾಡಲು ಚೊಕ್ಕಹಳ್ಳಿ ಸಮೀಪದ ಡಾಬಾಗೆ ಹೋಗುವಾಗ ಕಟ್ಟಿನಲ್ಲಿ ನೋಟನ್ನು ತೆಗೆದಿದ್ದು ಇದನ್ನು ನೋಡಿದ ಕಳ್ಳರು ಹತ್ತಿರಕ್ಕೆ ಬಂದು ಹೊಡೆದು ಕಾರಿನಲ್ಲಿದ್ದ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ ಎಂದು ಉಷಾ ರಮೇಶ್ ಅಳಲು ತೋಡಿಕೊಂಡಿದ್ದರು. ಹಾಗೆಯೇ ಠಾಣೆಗೆ ದೂರು ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net