

ಚಿಕ್ಕಬಳ್ಳಾಪುರ: ತೋಟದ ಜಮೀನಿಂದ ಮನೆಗೆ ಬರುತ್ತಿದ್ದ ವೃದ್ದೆಯನ್ನು ಅಡ್ಡಗಟ್ಟಿದ ಬೈಕ್ ಸವಾರನೊಬ್ಬ ಕರಿಮಣಿಯಲ್ಲಿನ ಚಿನ್ನದ ಗುಂಡಗಳ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಚಿಂತಾಮಣಿ ತಾಲೂಕಿನ ನಾಯಿಂದ್ರಹಳ್ಳಿಯ ಲಕ್ಷ್ಮೀನಾರಾಯಣಮ್ಮ ಚಿನ್ನದ ಸರ ಕಳೆದುಕೊಂಡವರು. ವೃದ್ಧೆ ಮನೆಯಲ್ಲಿನ ಹಸುಗಳಿಗೆ ಮೇವು ತರಲು ತೋಟದ ಜಮೀನಿಗೆ ಹೋಗಿ ವಾಪಸ್ ಬರುತ್ತಿದ್ದರು. ಇದೇ ವೇಳೆ ನನಗೆ ರೇಷ್ಮೆ ಸೊಪ್ಪು ಬೇಕಾಗಿದೆ ಎಂದು ಕೇಳಿದ ಬೈಕ್ ಸವಾರ ವೃದ್ದೆಯ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರಡ್ಮೂರು ದಿನಗಳ ಹಿಂದೆ ಚಿಂತಾಮಣಿ ತಾಲೂಕಿನ ಕುರುಬೂರು ಬಳಿ ಕುರಿ ಮೇಯಿಸುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಬೈಕ್ ಸವಾರನೋರ್ವ ಕಸಿದುಕೊಂಡು ಪರಾರಿಯಾದ ಪ್ರಕರಣದ ಬೆನ್ನಲೆ ಮತ್ತೊಂದು ಘಟನೆ ನಡೆದಿದೆ.