ಅಪ್ರಾಪ್ತರಿಂದ ದಾಳಿಂಬೆ ಹಣ್ಣು ಕಳವು |Theft of pomegranates by minors

ರೈತರ ತೋಟದಲ್ಲಿನ ದಾಳಿಂಬೆ ಹಣ್ಣುಗಳನ್ನು ಅಪ್ರಾಪ್ತರಿಂದ ಕಳವು ಮಾಡಿಸಿ, ಮಾರುಕಟ್ಟೆಯಲ್ಲಿ ಮಾರುತ್ತಿದ್ದ ದಂಧೆಯನ್ನು ರೈತರು ಬಯಲಿಗೆಳೆದಿದ್ದಾರೆ.
Theft of pomegranates by minors
Theft of pomegranates by minors
Published on: 
  • ದಂಧೆಗೆ ಹಣ್ಣಿನ ವ್ಯಾಪಾರಿಗಳೇ ರೂವಾರಿಗಳು

ಚಿಕ್ಕಬಳ್ಳಾಪುರ:ರೈತರ ತೋಟದಲ್ಲಿನ ದಾಳಿಂಬೆ ಹಣ್ಣುಗಳನ್ನು ಅಪ್ರಾಪ್ತರಿಂದ ಕಳವು ಮಾಡಿಸಿ, ಮಾರುಕಟ್ಟೆಯಲ್ಲಿ ಮಾರುತ್ತಿದ್ದ ದಂಧೆಯನ್ನು ರೈತರು ಬಯಲಿಗೆಳೆದಿದ್ದಾರೆ.

ತಾಲೂಕಿನ ಮುಸ್ಟೂರು ಸಮೀಪದ ವಿವಿಧ ತೋಟಗಳಲ್ಲಿನ ದಾಳಿಂಬೆ ಹಣ್ಣುಗಳನ್ನು ಕಿತ್ತು ಅಪ್ರಾಪ್ತನೊಬ್ಬ ಮೂಟೆಗೆ ತುಂಬಿಸುತ್ತಿದ್ದ. ಇದನ್ನು ಕಂಡ ರೈತರು ಪ್ರಶ್ನಿಸುತ್ತಿದ್ದಂತೆ ಆತ ಓಡಿ ಹೋಗಲು ಯತ್ನಿಸಿದ್ದಾನೆ. ಕೊನೆಗೆ ಹಿಡಿದು ವಿಚಾರಿಸಿದಾಗ ಒಂದೆಡೆ 750 ಕೆ.ಜಿ ದಾಳಿಂಬೆ ಹಣ್ಣುಗಳನ್ನು ಸಂಗ್ರಹಿಸಿರುವುದು, ಇದಕ್ಕೆ ಹಣ್ಣಿನ ವ್ಯಾಪಾರಿಗಳೇ ರೂವಾರಿಗಳು ಎನ್ನುವುದು ಗೊತ್ತಾಗಿದೆ.

ರೈತರ ಪೂರ್ವ ಯೋಜನೆಯಂತೆ ಆರೋಪಿ ಸಹಜವಾಗಿ ಕದ್ದ ಮಾಲನ್ನು ನಗರದಲ್ಲಿನ ಬಜಾರ್​ ರಸ್ತೆಯಲ್ಲಿ ಹಣ್ಣಿನ ವ್ಯಾಪಾರಿಗಳಿಗೆ ನೀಡಿದ್ದು ಇದರ ವಹಿವಾಟಿನಲ್ಲಿ ತೊಡಗಿದ್ದವರಿಗೆ ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಗರ ಠಾಣೆಗೆ ದೂರು ನೀಡಿದ್ದಾರೆ.

ಅಪ್ರಾಪ್ತನಿಗೆ ಕುಮ್ಮಕ್ಕು: ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಹೊಂದಿರುವ ಹಣ್ಣುಗಳನ್ನು ರೈತರ ತೋಟದಿಂದ ಕದಿಯಲು ಅಪ್ರಾಪ್ತನಿಗೆ ಕೆಲ ವ್ಯಾಪಾರಸ್ಥರು ಕುಮ್ಮಕ್ಕು ನೀಡುತ್ತಿದ್ದರು. ಗುರುತಿಸಿದ ತೋಟದ ಬಳಿಗೆ ಆಟೋದಲ್ಲಿ ಕರೆದುಕೊಂಡು ಬಂದು, ಹಣ್ಣು ಕಿತ್ತು ಮೂಟೆಗೆ ತುಂಬಿಸಲು ತಿಳಿಸಲಾಗುತ್ತಿತ್ತು. ಭಯದಿಂದ ಬಾಲಕ ನಿರಾಕರಿಸಿದಾಗ ಬೆದರಿಕೆಯನ್ನೊಡ್ಡಲಾಗುತ್ತಿತ್ತು. ಇನ್ನು ಕಳ್ಳತನದ ಮಾಲನ್ನು ಮಾರುಕಟ್ಟೆಗೆ ತಂದು ವ್ಯಾಪಾರಸ್ಥರು ಮಾರುತ್ತಿದ್ದರು ಎನ್ನಲಾಗಿದೆ.

ಬಯಲಿಗೆಳೆದ ರೈತರು

ದಾಳಿಂಬೆ ತೋಟದಲ್ಲಿ ನಿರಂತರ ಕಳ್ಳತನದ ಹಿನ್ನೆಲೆಯಲ್ಲಿ ರೈತರು ರಾತ್ರಿ ವೇಳೆ ತೋಟದಲ್ಲಿ ಕಾವಲಿಗಿರುತ್ತಿದ್ದರು. ಇದರ ಬಗ್ಗೆ ಮಾಹಿತಿ ಹೊಂದಿದ್ದ ದಂಧೆಕೋರರು ಹಗಲಿನ ವೇಳೆ ಹುಡುಗನನ್ನು ಕಳುಹಿಸಿ, ದಾಳಿಂಬೆ ಕೀಳಿಸುತ್ತಿದ್ದರು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದ ರೈತರು ಕಳ್ಳತನ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ರೈತರು ಲಾಂತರ ರೂ. ಸಾಲ ಮಾಡಿ, ಕಷ್ಟಪಟ್ಟು ಬೆಳೆಗಳನ್ನು ಬೆಳೆಯುತ್ತಿದ್ದು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಳ್ಳರು ತೋಟದಲ್ಲಿನ ಹಣ್ಣುಗಳನ್ನು ಕದ್ದು ಮಾರುವಂತಹುದು ತಲೆ ನೋವಾಗಿ ಪರಿಣಿಮಿಸಿದೆ. ಅಪ್ರಾಪ್ತ ಬಾಲಕಿನಿಂದ ದಾಳಿಂಬೆ ಹಣ್ಣುಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿ, ತನಿಖೆಗೆ ಮನವಿ ಮಾಡಲಾಗಿದೆ.
> ಪ್ರಕಾಶ್​, ದಾಳಿಂಬೆ ಬೆಳೆಗಾರ, ಮುಷ್ಟೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net