ಬಿದ್ದು ಎದ್ದು ಪಯಣಿಸುವ ಫಜೀತಿ!

ಗುಡಿಬಂಡೆ ತಾಲೂಕಿನ ಹಳೇ ಗುಡಿಬಂಡೆಯಿಂದ ಉಲ್ಲೋಡು ಗ್ರಾಮದವರೆಗೂ ರಸ್ತೆಗೆ ಜಲ್ಲಿಕಲ್ಲು ಹಾಕಿ ಹಾಗೇ ಬಿಟ್ಟಿರುವುದು.
ಗುಡಿಬಂಡೆ ತಾಲೂಕಿನ ಹಳೇ ಗುಡಿಬಂಡೆಯಿಂದ ಉಲ್ಲೋಡು ಗ್ರಾಮದವರೆಗೂ ರಸ್ತೆಗೆ ಜಲ್ಲಿಕಲ್ಲು ಹಾಕಿ ಹಾಗೇ ಬಿಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಿದ್ದು ಎದ್ದು ಪಯಣಿಸುವ ಫಜೀತಿ!
ಬಿದ್ದು ಎದ್ದು ಪಯಣಿಸುವ ಫಜೀತಿ!
ಗುಡಿಬಂಡೆ: ಗುತ್ತಿಗೆದಾರನ ರ್ನಿಲಕ್ಷ$್ಯವೋ ಅಥವಾ ಅನುದಾನದ ಕೊರತೆಯಿಂದಲೋ ರಸ್ತೆ ಕಾಮಗಾರಿ ಪ್ರಾರಂಭಿಸಿ 8 ತಿಂಗಳಾದರೂ ಇದುವರೆಗೂ ಪೂರ್ಣಗೊಳ್ಳದ ಕಾರಣ ಬಿದ್ದು ಎದ್ದು ಪ್ರಯಾಣ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಹೌದು... ಗುಡಿಬಂಡೆ ಪಟ್ಟಣದಿಂದ ಕರಿಗಾನತಮ್ಮನಹಳ್ಳಿವರೆಗೂ ರಾಮಪಟ್ಟಣ ರಸ್ತೆ ಕಾಮಗಾರಿಗೆ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ 5 ಕೋಟಿ ರೂ. ವೆಚ್ಚದಲ್ಲಿ ಭೂಮಿ ಪೂಜೆ ಮಾಡಿ ವರ್ಷವೇ ಕಳೆಯುತ್ತಿದೆ. ಆದರೆ, ರಸ್ತೆಗೆ ಜಲ್ಲಿ ಹಾಕಿ 8 ತಿಂಗಳು ಕಳೆದಿದೆ. ಲೋಕೋಪಯೋಗಿ ಅಧಿಕಾರಿಗಳ ರ್ನಿಲಕ್ಷದಿಂದ ಗುತ್ತಿಗೆದಾರ ಇದುವರೆಗೂ ಡಾಂಬರು ಹಾಕುವ ಗೋಜಿಗೆ ಹೋಗಿಲ್ಲ. ಪರಿಣಾಮ, ಡಾಂಬರು ಹಾಕುತ್ತಾರೋ ಇಲ್ಲವೋ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಮುಂಗಾರು ಮಳೆ ಪ್ರಾರಂಭಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
ಹಳೇಗುಡಿಬಂಡೆಯಿಂದ ಉಲ್ಲೋಡು ಗ್ರಾಮದವರೆಗೂ ಡಾಂಬರು ರಸ್ತೆಯನ್ನು ಕಿತ್ತು, ರಸ್ತೆಗೆ ಜಲ್ಲಿ ಮತ್ತು ಎಂ.ಸ್ಯಾಂಡ್​ ಹಾಕಿದ್ದಾರೆ. ಆದರೆ, ಅದು ಕೂಡ ಪೂರ್ಣಗೊಂಡಿಲ್ಲ. ಪ್ರತಿ ದಿನ ಪುಲುವಮಾಕಳಹಳ್ಳಿ, ಉಲ್ಲೋಡು, ಆಲಗದರೇನಹಳ್ಳಿ, ಕರಿಗಾನತಮ್ಮನಹಳ್ಳಿ, ಚೌಟತಿಮ್ಮನಹಳ್ಳಿ, ಇಡರಹಳ್ಳಿ, ರಾಮಪಟ್ಟಣ ಸೇರಿ ಇತರ ಗ್ರಾಮಗಳಿಗೆ ಹೋಗುವ ಗ್ರಾಮಸ್ಥರು ಜಲ್ಲಿ ಕಲ್ಲುಗಳಲ್ಲೆ ಎದ್ದುಬಿದ್ದು ಪ್ರಯಾಣ ಮಾಡಬೇಕಾದ ದುಸ್ಥಿತಿ ಉದ್ಭವವಾಗಿದೆ.
ಜೂನ್​ ಮೊದಲ ವಾರದಲ್ಲಿ ಮುಂಗಾರು ಮಳೆ ಪ್ರಾರಂಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಳೆ ಬಂದರೆ ಜಲ್ಲಿಕಲ್ಲಿನ ರಸ್ತೆಯಲ್ಲಿ ಸಂಚರಿಸಲು ತೊಂದರೆ ಆಗುತ್ತದೆ. ಮಳೆ ಬಂದಾಗ ಡಾಂಬರು ಹಾಕಿದರೆ ಬೇಗ ಕಿತ್ತುಬರುತ್ತದೆ. ಆದ್ದರಿಂದ ಮಳೆಗೂ ಮುನ್ನವೇ ರಸ್ತೆ ಕಾಮಗಾರಿ ಮುಗಿಸಿದರೆ ಜನತೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ಈ ಭಾಗದ ಜನತೆ.
ಗುಡಿಬಂಡೆ ಪಟ್ಟಣದಿಂದ ಕರಿಗಾನತಮ್ಮನಹಳ್ಳಿವರೆಗೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೇವೆ. ಈಗಾಗಲೇ 5 ಕೋಟಿ ರೂ. ಅನುದಾನದಲ್ಲಿ ಗುಡಿಬಂಡೆಯಿಂದ ಉಲ್ಲೋಡುವರೆಗೂ ಕಾಮಗಾರಿ ಪ್ರಾರಂಭಿಸಿದ್ದಾರೆ. ಉಲ್ಲೋಡು ಗ್ರಾಮದಿಂದ ಕರಿಗಾನತಮ್ಮನಹಳ್ಳಿ ರಸ್ತೆಗೂ ಹೆಚ್ಚುವರಿಯಾಗಿ 4.5 ಕೋಟಿ ಬಿಡುಗಡೆ ಮಾಡಿಸಿ, ಭೂಮಿ ಪೂಜೆ ಮಾಡಲಾಗುವುದು. ಕಾಮಗಾರಿ ಸ್ವಲ್ಪ ತಡವಾದರೂ ಮೋರಿ ನಿಮಾರ್ಣ ಮಾಡಲು ರೈತರ ಜಮೀನುಗಳಲ್ಲಿ ಸ್ವಲ್ಪ ಜಾಗಬೇಕಾಗಿತ್ತು. ಮೋರಿ ಕಾಮಗಾರಿಯೂ ಮುಗಿದಿದ್ದು, ಇಂಜಿನಿಯರ್​ ಕರೆಸಿ ಕೂಡಲೇ ಪೂರ್ತಿ ಮಾಡುವಂತೆ ಸೂಚಿಸಲಾಗುವುದು.
-ಎಸ್​.ಎನ್​.ಸುಬ್ಬಾರೆಡ್ಡಿ, ಶಾಸಕ
ಪ್ರಸ್ತುತ ಇರುವ ಡಾಂಬರ್​ ರಸ್ತೆಯನ್ನು ಕಿತ್ತು ಜಲ್ಲಿಕಲ್ಲು ಹಾಕಿ ಸುಮಾರು ತಿಂಗಳುಗಳಾಗಿದೆ. ಜಲ್ಲಿಕಲ್ಲುಗಳಲ್ಲಿ ವಾಹನ ಓಡಿಸಲು ಕಷ್ಟವಾಗಿ ಅನೇಕ ಭಾರಿ ಅಪಘಾತಗಳಾಗಿವೆ. ಇನ್ನು ಮಳೆ ಪ್ರಾರಂಭವಾದರೆ ಓಡಾಡಲು ಸಮಸ್ಯೆ ಆಗುತ್ತದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಗುತ್ತಿಗೆದಾರನಿಗೆ ಚುರುಕು ಮುಟ್ಟಿಸಿ, ಡಾಂಬರು ಹಾಕಿಸಿ ಜನರು ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು.
- ದೇವರಾಜ್​ ರೆಡ್ಡಿ, ಆಲಗದಿರೇನಹಳ್ಳಿ ಗ್ರಾಮಸ್ಥ
8 ಗುಡಿ -1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net