ಬಾಗೇಪಲ್ಲಿ: ಮನರೇಗಾ ಕಾಯ್ದೆ, ಹಕ್ಕು ಸ್ವರೂಪವನ್ನು ತೆಗೆದುಹಾಕಿ ಕೇಂದ್ರ ಸರ್ಕಾರ ಜಾರಿಗೆ ತಂದ ಜೀ ರಾಮ್ ಜೀ ಯೋಜನೆಯನ್ನು ವಾಪಸ್ ಪಡೆಯಬೇಕೆಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಆಗ್ರಹಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿ, 2004-&5ರಲ್ಲಿ ಮನಮೋಹನ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿತ್ತು. ಗ್ರಾಮೀಣ ಕೂಲಿಕಾರರು, ರೈತರು, ಇತರ ಶೇ.30 ದುಡಿಮೆಗಾರರು ಜನರು ಜೀವನೋಪಯಕ್ಕಾಗಿ ಈ ಕಾಯ್ದೆಯನ್ನೇ ಅವಲಂಬಿಸಿದ್ದರು. ಆದರೆ ಬಿಜೆಪಿ ಕೇಂದ್ರ ಸರ್ಕಾರ ಕಾಯ್ದೆ, ಹಕ್ಕು ಸ್ವರೂಪವನ್ನು ತೆಗೆದುಹಾಕಿ ಹೊಸದಾಗಿ ವಿಕಸಿತ ಭಾರತ ರೋಜ್ಗಾರ್ ಮತ್ತು ಮಿಷನ್ ಗ್ರಾಮೀಣ ಖಾತರಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿರುವುದು ಖಂಡನೀಯ.
ಕೇಂದ್ರ ಶೇ.60, ರಾಜ್ಯ ಸರ್ಕಾರ ಶೇ.40 ಅನುಪಾತದ ಮೊತ್ತವನ್ನು ಖರ್ಚು ಮಾಡಬೇಕೆಂಬ ಅಂಶವಿದೆ. ಆದರೆ ಕೂಲಿಕಾರರಿಗೆ ರಾಜ್ಯ ಸರ್ಕಾರದ ಪಾಲಿನ ಹಣ ನೀಡಿಲ್ಲವೆಂದು ಕೇಂದ್ರ, ಕೇಂದ್ರ ಸರ್ಕಾರದ ಹಣ ಕೊಟ್ಟಿಲ್ಲವೆಂದು ರಾಜ್ಯ ಸರ್ಕಾರ ಆರೋಪಿಸುತ್ತ ಈ ಎರಡು ಸರ್ಕಾರಗಳು ಕಾರ್ಮಿಕರನ್ನು ಕೂಲಿಯಿಂದ ವಂಚಿತರಾಗಿ ಮಾಡುತ್ತದೆ ಎಂದು ದೂರಿದರು.
ಮನರೇಗಾ ಕಾಯ್ದೆಯಲ್ಲಿ ಯಂತ್ರಗಳನ್ನು ಬಳಸಬಾರದು. ಆದರೆ ಈ ಹೊಸ ಕಾಯ್ದೆ ಯಂತ್ರಗಳನ್ನು ಬಳಸಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುತ್ತದೆ. ಈ ಯೋಜನೆಯಲ್ಲಿ ಕೇಂದ್ರ ಅನುಮೋದನೆ ಪಡೆದು ಕೆಲಸ ಕೊಡಬೇಕು. ಕೇಂದ್ರ ಅಧಿಸೂಚಿತ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಾತ್ರವೇ ಉದ್ಯೋಗ ಖಾತರಿ ಜಾರಿಯಾಗಬೇಕೆಂಬ ಅಂಶಗಳು ಕೂಲಿಕಾರರ ಹಕ್ಕನ್ನು ಕಸಿದುಕೊಳ್ಳಲಿದೆ ಎಂದರು.
ಕೇಂದ್ರ ಈ ಕಾರ್ಮಿಕ ವಿರೋಧಿ ನೀತಿಯನ್ನು ಕೃಷಿ ಮತ್ತು ಗ್ರಾಮೀಣ ಕಾರ್ಮಿಕ ಸಂಘದ ತಾಲೂಕು ಸಮಿತಿ ಖಂಡಿಸುತ್ತದೆ. ಈ ಹೊಸ ಕಾಯ್ದೆಯು ಉದ್ಯೋಗ ಖಾತ್ರಿಯನ್ನು ಮುಂದಿನ ದಿನಗಳಲ್ಲಿ ತೆಗೆದುಹಾಕುವ ಹುನ್ನಾರವಾಗಿದ್ದು, ಸರ್ಕಾರ ಇದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ತಾಲೂಕು ದಲಿತ ಹಕ್ಕುಗಳು ಸಮಿತಿ ಮುಖಂಡ ಬಿಳ್ಳೂರು ನಾಗರಾಜು ಮಾತನಾಡಿ, ಗಾಂಧೀಜಿಯ ಗ್ರಾಮ ಸ್ವರಾಜ್ ಕಲ್ಪನೆಗೆ ಪೂರಕವಾಗಿ ಗ್ರಾಮೀಣ ರೈತರು, ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಜಾರಿಗೆ ತಂದ ಈ ಯೋಜನೆ ಮರುಸ್ಥಾಪನೆ ಮಾಡುವವರೆಗೆ ಸಿಪಿಐ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದರು.